

ರೋಣ: ಶಿಶುಪಾಲನಾ ಕೇಂದ್ರ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದರ ಜತೆಗೆ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ವಿ.ಎಸ್. ಸಜ್ಜನ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕಿನ ಶಿಶುಪಾಲನೆ ಕೇಂದ್ರಗಳ ಆರೈಕೆದಾರರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕ್ರೆಚೆಸ್ ಸಂಸ್ಥೆಯು ದೆಹಲಿಯಲ್ಲಿ 54 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಎಲ್ಲ ರಾಜ್ಯಗಳಲ್ಲಿ ಮಕ್ಕಳ ಬೆಳವಣಿಗೆ, ಅವರ ಹಕ್ಕುಗಳ ರಕ್ಷಣೆ ಗಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಗ್ರಾಪಂ ಮಟ್ಟದಲ್ಲಿ 4,000 ಶಿಶುಪಾಲನೆ ಕೇಂದ್ರಗಳನ್ನು ಪ್ರಾರಂಭಿಸಲು ಒಡಂಬಡಿಕೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಕೇಂದ್ರದ ಆರೈಕೆ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಟ್ಟದ ತರಬೇತಿ ನೀಡಲಾಗಿತ್ತು. ಅಲ್ಲಿ ತರಬೇತಿ ಪಡೆದವರು ತಾಲೂಕು ಮಟ್ಟದಲ್ಲಿ ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ಹಾಗೂ ತರಬೇತಿದಾರರಾದ ಮಂಜುಳಾ ಗುನಾರಿ, ರಾಜೇಶ್ವರಿ ಮೇಟಿ ತರಬೇತಿ ನೀಡಿದರು. 54 ಆರೈಕೆ ಸಿಬ್ಬಂದಿ ಹಾಜರಿದ್ದರು.