ಮುಖ್ಯಮಂತ್ರಿ ಪ್ರಬುದ್ಧರಾಗಿ ಮಾತನಾಡಲಿ

7 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಪ್ರಬುದ್ಧತೆಯಿಂದ ಮಾತನಾಡುತ್ತಾರೆ. ಅವರಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವುದು ಸರಿಯಲ್ಲ. ಜ್ಞಾನ ಇಟ್ಟುಕೊಂಡು ಸಂಪೂರ್ಣ ಮಾಹಿತಿಯೊಂದಿಗೆ ಮಾತನಾಡಿದರೆ ಉತ್ತಮ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಿದಲ್ಲಿರುವ ಎಲ್ಲ ರಾಜ್ಯಗಳಲ್ಲೂ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾದ ಮಾಹಿತಿ ಅರಿಯದೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊಟ್ಟೆ ವಿತರಿಸುತ್ತಿಲ್ಲ ಎಂದು ಹೇಳಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

ಚೀನಾ ಭಾರತದ ಗಡಿ ನುಸುಳಿದ್ದು ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲೇ. ನೆಹರು ಆಡಳಿತವಿದ್ದ ಸಮಯದಲ್ಲೇ 34 ಸಾವಿರ ಚದರ ಕಿ.ಮೀ ಭೂಮಿ ವಶಪಡಿಸಿಕೊಂಡಿದ್ದಾರೆ. ಕಾಂಗ್ರೆಸ್​ನವರು ನಮ್ಮ ಕೇಂದ್ರ ಸರ್ಕಾರವನ್ನು ನಂಬದಿದ್ದರೆ, ಸೈನ್ಯದ ಅಧಿಕಾರಿಗಳನ್ನು ನಂಬುವುದನ್ನು ಕಲಿಯಲಿ. ನಮ್ಮ ಸೈನ್ಯದ ಅಧಿಕಾರಿಗಳು ಒಂದಿಂಚು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆಯೇ ಸೈನಿಕರಿಗೆ ಸಕಲ ಸೌಲಭ್ಯ ನೀಡಲಾಗಿದೆ ಎಂದರು.

ವಕ್ಫ ಕುರಿತು ಸಚಿವ ಸಂತೋಷ ಲಾಡ್​ ಏನನ್ನೂ ಓದಿಲ್ಲ. ಇಂದು ವಕ್ಫ ಆಸ್ತಿ 39 ಲಕ್ಷ ಎಕರೆ ಭೂಮಿ ಇದೆ. ಇಷ್ಟು ದೊಡ್ಡ ಪ್ರಮಾಣದ ಆದಾಯ ಹೊಂದಿರುವ ಖಾಸಗಿ ಸಂಸ್ಥೆ ಇದೇ ಆಗಿದೆ. ಇದರಿಂದ ಸಾಕಷ್ಟು ಆದಾಯ ಬರುತ್ತಿದ್ದರೂ ಮುಸ್ಲಿಂರ ಅಭಿವೃದ್ಧಿ ಆಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದರ ಆದಾಯ ಮತ್ತಷ್ಟು ಹೆಚ್ಚಾಗಿ ಬಡ ಮುಸ್ಲಿಂ ಜನರ ಅಭಿವೃದ್ಧಿಯಾದರೆ ಕಾಂಗ್ರೆಸ್​ ವೋಟ್​ ಬ್ಯಾಂಕ್​ ಕಡಿಮೆ ಆಗಲಿದೆ ಎಂಬ ಭಯದಿಂದ ಸಂತೋಷ ಲಾಡ್​ ಸೇರಿ ಕಾಂಗ್ರೆಸ್​ ನಾಯಕರು ಹತಾಷರಾಗಿ ಮಾತನಾಡುತ್ತಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net