ಸಿಬಿಐಗೆ ಮುಡಾ ಪ್ರಕರಣ ವಹಿಸಲಿ: ಎಂಎಲ್ಸಿ ಎಚ್.ವಿಶ್ವನಾಥ್ ಒತ್ತಾಯ

Vishwanath Siddaramaiah
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಗರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಸರು ಸೇರಿರುವ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಅಲ್ಲದೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರನ್ನು ಬದಲಾಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.

ಮುಡಾ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ದೇಶಾದ್ಯಂತ ಸದ್ದು ಮಾಡುತ್ತಿದೆ. ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇಡೀ ದೇಶದಲ್ಲಿ ಕರ್ನಾಟಕ ಪೊಲೀಸರಿಗೆ ದೊಡ್ಡ ಹೆಸರಿದೆ. ಪ್ರಾಮಾಣಿಕತೆ ಹಾಗೂ ದಕ್ಷತೆಗೆ ನಮ್ಮ ಪೊಲೀಸರು ಹೆಸರುವಾಸಿ. ಆದ್ದರಿಂದ ಲೋಕಾಯುಕ್ತ ಪೊಲೀಸರು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಮುಡಾ ಪ್ರಕರಣದ ತನಿಖೆ ನಡೆಸಬೇಕು. ಮೈಸೂರಿನ ಲೋಕಾಯುಕ್ತ ಎಸ್ಪಿ ಬಗ್ಗೆ ಗೌರವ ಇದೆ. ಆದರೆ, ಎಡಿಜಿಪಿ ಚಂದ್ರಶೇಖರ್ ಬಗ್ಗೆ ನನಗೆ ಅನುಮಾನ ಇದೆ. ಅವರು ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯನ ಶಿಷ್ಯರಾಗಿದ್ದಾರೆ. ಆದ್ದರಿಂದ ಅವರನ್ನು ಬದಲಾಯಿಸಿ ಖಡಕ್ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಅಧೀನದ ಅಧಿಕಾರಿಗಳ ಮುಂದೆ ಕೈ ಕಟ್ಟಿ ನಿಲ್ಲುವ ಕಾಲ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅವರ ಇಂದಿನ ಪರಿಸ್ಥಿತಿ ನೋಡಿದರೆ ಮನಸ್ಸಿಗೆ ವೇದನೆ ಆಗುತ್ತದೆ. ಈ ಹಿಂದೆ ಸುದ್ದಿಗೋಷ್ಠಿ ನಡೆಸಿ 14 ಸೈಟ್‌ಗಳನ್ನು ಹಿಂದಿರುಗಿಸಿ ಎಂದು ಹೇಳಿದ್ದೆ. ನಗರಾಭಿವೃದ್ಧಿ ಸಚಿವ ನಿಮ್ಮನ್ನು ದಾರಿ ತಪ್ಪಿಸಿದ್ದಾರೆ. ಬೇರೆಯವರನ್ನು ರಕ್ಷಣೆ ಮಾಡಲು ಹೋಗಿ ನಿಮಗೆ ಈ ಸ್ಥಿತಿ ಬಂದಿದೆ. ನಿಮ್ಮ ಪ್ರಕರಣ ರಾಜಭವನ, ರಾಜ್ಯಪಾಲ, ಹೈಕೋರ್ಟ್, ಜನಪ್ರತಿನಿಧಿಗಳ ಸಭೆ ದಾಟಿ ಲೋಕಾಯುಕ್ತ ತನಿಖೆಗೆ ಬಂದು ನಿಂತಿದೆ ಎಂದರು.

ನಗರಾಭಿವೃದ್ಧಿ ಇಲಾಖೆಯ ಸಚಿವ ಒಬ್ಬ ಹುಚ್ಚ, ಹುಂಬ, ಅನುಭವ ಇಲ್ಲದವ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾನೆ. ಮುಡಾದಲ್ಲಿ ಇಷ್ಟೊಂದು ಹಗರಣ ಹೊರಗೆ ಬಂದಿದೆ. ಇನ್ನು ಬೇರೆ ಕಡೆ ಹುಡುಕಿದರೆ ಎಷ್ಟು ಹಗರಣ ಹೊರ ಬರಬಹುದು ಎಂದು ಪ್ರಶ್ನಿಸಿದರು.

ನಾನು ವಕೀಲನಾಗಿದ್ದೆ. ಸಿದ್ದರಾಮಯ್ಯ ಕೂಡ ವಕೀಲರಾಗಿ ಕೆಲಸ ಮಾಡಿದ್ದಾರೆ. ಕಾನೂನು ನಮಗೆ ಚೆನ್ನಾಗಿ ತಿಳಿದಿದೆ. ನೀವು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ. ಆದರೆ, ನೀವು ಮತ್ತು ನಿಮ್ಮ ಆಪ್ತರು ನ್ಯಾಯಾಲಯ ಮತ್ತು ನ್ಯಾಯಾಧೀಶರ ಬಗ್ಗೆ ನಂಬಿಕೆ ಕಳೆದುಕೊಂಡ ರೀತಿ ಮಾತನಾಡುತ್ತಿದ್ದೀರಿ. ತೀರ್ಪುನ್ನು ನಾನು ಓದಿದ್ದೇನೆ. ಎಲ್ಲ ಆಯಾಮಗಳನ್ನು ಚರ್ಚೆ ಮಾಡಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎಂದರು.

ಕಾನೂನು ಸಲಹೆಗಾರ, ಸ್ನೇಹಿತರು, ಮಂತ್ರಿ ಮಂಡಲ, ಆಪ್ತ ವಲಯ ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ದಿಕ್ಕು ತಪ್ಪಿಸಿದ್ದಾರೆ. ಆದರೆ, ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಆಗಲ್ಲ. ರಿಡೋ ಹೊರಗೆ ಬಂದಾಗ ಲೋಕಾಯುಕ್ತ ಮುಚ್ಚುವ ಪ್ರಯತ್ನ ನಡೆಯಿತು. ನೀವು ಯಾವ ಸೀಮೆ ಸತ್ಯವಂತ ಎಂದು ಜರಿದರು.

ಈಗ ಸ್ನೇಹಮಯಿ ಕೃಷ್ಣನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವನ ಮೇಲೆ ಹಳೆಯ ಪ್ರಕರಣವನ್ನು ತೆಗೆದು ಆತನನ್ನು ಫಿಕ್ಸ್ ಮಾಡಲು ಮುಂದಾಗಿದ್ದೀರಿ. ಸ್ನೇಹಮಯಿ ಕೃಷ್ಣನ ಜತೆ ನಾವಿದ್ದೇವೆ. ಅವರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದರು.

ಮಹದೇವಪ್ಪ ಒಬ್ಬ ಬೊಗಳೆದಾಸ:

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಒಬ್ಬ ಬೊಗಳೆದಾಸ. ಸಂವಿಧಾನ, ಪ್ರಜಾಪ್ರಭುತ್ವದ, ಅಂಬೇಡ್ಕರ್, ನ್ಯಾಯದ ಬೊಗಳೆ ಮಾತಾಡುವ ಈತ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ ಎಂದು ಚಮಚಾ ರೀತಿ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ ಎಂದು ಕೋರ್ಟ್ ಹೇಳಬೇಕೇ ಹೊರತು ಮಹದೇವಪ್ಪ ಅಲ್ಲ ಎಂದು ಟೀಕಿಸಿದರು.
ದಸರಾಗೆ 45 ಕೋಟಿ ರೂ. ಅನುದಾನ ನೀಡಿದ್ದರೂ ಎಲ್ಲ ಪಾಸ್‌ಗಳಿಗೂ ಹೆಚ್ಚು ಬೆಲೆ ನಿಗದಿ ಮಾಡಲಾಗಿದೆ. ಯಾರಿಗೆ ಎಷ್ಟು ಕಿಕ್ ಬ್ಯಾಕ್ ಬರುತ್ತದೆ ಗೊತ್ತಿಲ್ಲ. ಒಟ್ಟಾರೆ ದಸರಾವನ್ನು ಹಾಳು ಮಾಡುಬಿಟ್ಟಿದ್ದಾರೆ. ಮಹದೇವಪ್ಪನಿಗೆ ನಾಚಿಗೆ ಆಗಬೇಕು. ಶಾಸಕರ ಒಂದು ಕಮಿಟಿ ರಚಿಸಿಲ್ಲ. ಎಲ್ಲರಿಗೂ ಕಣ್ಣುಕಟ್ಟಿ ಎಲ್ಲ ಹಣವನ್ನು ಹೊತ್ತುಕೊಂಡು ಹೋಗುತ್ತಿಯಾ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮೋರ್ಚಾ!

ಬಿಜೆಪಿಯಲ್ಲಿ ಇದೀಗ ಹೊಸ ಮೋರ್ಚಾ ಅಸ್ತಿತ್ವಕ್ಕೆ ಬಂದಿದೆ. ಅದರ ಹೆಸರು ಸಿದ್ದರಾಮಯ್ಯ ಮೋರ್ಚಾ ಎಂದು. ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಅದರ ಸದಸ್ಯರಾಗಿದ್ದಾರೆ. ಯತ್ನಾಳ್ ಇದೀಗ ಸಿದ್ದರಾಮಯ್ಯ ಪರ ಮಾತನಾಡುತ್ತಿದ್ದಾರೆ. ಅವರಿಗೆ ಮಾನ-ಮರ್ಯಾದೆ ಇಲ್ಲ. ಮುಡಾ ವಿಷಯವನ್ನು ಬೇರೆ ಕಡೆ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net