ಬಾಣಂತಿಯರ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ

Published on

ಬಳ್ಳಾರಿ : ಜಿಲ್ಲೆಯ ಐವರು ಬಾಣಂತಿಯರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಬಿ.ಶ್ರೀರಾಮುಲು ಆಗ್ರಹಿಸಿದರು.

ನಗರದ ಜಿಲ್ಲಾಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಹೆರಿಗೆ ವಾರ್ಡ್ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೃತ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಐವರು ಬಾಣಂತಿಯರು ಮೃತಪಟ್ಟರೂ ಈವರೆಗೂ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಒಮ್ಮೆಯೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಗುಡುಗಿದರು. ಕೇವಲ ಟೈಂ ಪಾಸ್ ರಾಜಕಾರಣ ಮಾಡುತ್ತಿದ್ದಾರೆ. ಬಳ್ಳಾರಿ ಜನರು ಸತ್ತರೂ ಜಮೀರ್ ಅಹ್ಮದ್ ಬೆಂಗಳೂರು ಬಿಟ್ಟು ಬರುವುದಿಲ್ಲ. ಏನಿದ್ದರೂ ಕೊಳ್ಳೆ ಹೊಡೆಯುವುದಕ್ಕೆ ಜಿಲ್ಲೆಗೆ ಆಗಮಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಈಗಾಗಲೇ ತನಿಖೆ ತಂಡದಿಂದ ಐವಿ ದ್ರಾವಣದಿಂದ ಮೃತಪಟ್ಟಿದ್ದಾರೆ ಎಂಬುದು ಸಾಬೀತು ಆಗಿದ್ದು ಇದರ ಜವಬ್ದಾರಿಯನ್ನು ಸಿಎಂ ಹಾಗೂ ಆರೋಗ್ಯ ಸಚಿವರು ವಹಿಸಿಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಐವಿ ದ್ರಾವಣ ಕಂಪನಿಯ ಮೇಲೆ ಕ್ರಮ ಜರುಗಿಸಿ, ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕು. ತಪ್ಪಿಸ್ಥರ ಮೇಲೆ ಕ್ರಮವಹಿಸದೆ ಏನು ಕತ್ತೆ ಕಾಯುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಕಳೆದ ಐದು ತಿಂಗಳಲ್ಲಿ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಬಾಣಂತಿಯರ ಸಾವಾಗಿದೆ. ಆದರೆ, ಈವರೆಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಸಚಿವರು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳದೆ ಬೆಂಗಳೂರಿನಲ್ಲಿ ಪ್ರಪಂಚ ನೋಡುತ್ತಿದ್ದಾರೆ ಎಂದು ಅಕ್ರೋಶಗೊಂಡರು. ನಾನು ಆರೋಗ್ಯ ಸಚಿವನಾದ ವೇಳೆ ತಾಯಿ ಮಗು ಆರೈಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ, ಈಗ ಕೊನೆಯ ಸ್ಥಾನದಲ್ಲಿದೆ ಎಂದು ಟೀಕಿಸಿದರು.

ಮುಡಾದಲ್ಲಿ 700 ಕೋಟಿ ಅವ್ಯವಹಾರ : ಮುಡಾ ಸೈಟ್ ಹಂಚಿಕೆಯಲ್ಲಿ 700 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಇಡಿ ಸಂಸ್ಥೆ ವರದಿ ನೀಡಿದೆ. ಆದ್ದರಿಂದ, ಇಡಿ ಹಾಗೂ ಸಿಬಿಐ ತನಿಖೆ ಮಾಡಬಾರದು ಎಂಬ ಉದ್ದೇಶದಿಂದ ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಸಮಾವೇಶ ಕೈಗೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಇಂತಹ ದೊಡ್ಡ ಸಮಾವೇಶ ಆಯೋಜಿಸುವುದಕ್ಕೆ ಸಮಯವಿದೆ. ಆದರೆ, ಮೃತರಾದ ಬಾಣಂತಿಯರ ಕುಟುಂಬಗಳಿಗೆ ಭೇಟಿ ನೀಡುವ ಸಮಯವಿಲ್ಲ , ಸರ್ಕಾರ ಸತ್ತವರ ಪರ ನಿಲ್ಲುತ್ತಿಲ್ಲ ಎಂದು ಗುಡುಗಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಲ್ಲರೂ ಸೇರಿದರೆ ಬಿಜೆಪಿ ಪಕ್ಷ ಗಟ್ಟಿಯಾಗಲಿದೆ. ಈಗಾಗಲೇ ಹೈಕಮಾಂಡ್ ಮುಂದೆ ಯತ್ನಾಳ್ ಉತ್ತರ ಕೊಟ್ಟಿದ್ದಾರೆ. ಅಲ್ಲದೆ, ಅವರು ಬಿಜೆಪಿಯಲ್ಲಿಯೇ ಉಳಿಯಬೇಕು. ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಹೋರಾಟ ನಡೆಸಲು ಒಂದಾಗಬೇಕಿದೆ. ರಾಜ್ಯದಲ್ಲಿ ಮಠ, ಜಮೀನುಗಳ ಆಸ್ತಿ ಕಬಳಿಕೆ ಆಗುತ್ತಿದ್ದರೂ ಕಾಂಗ್ರೆಸ್ ಶಾಸಕರು ಕೇರ್ ಮಾಡುತ್ತಿಲ್ಲ. ರಾಜ್ಯದಲ್ಲಿ ಸಚಿವ ಜಮೀರ್, ಡಿಸಿಎಂ ಡಿಕೆ ಶಿವಕುಮಾರ ಅವರ ಆಸ್ತಿ ದೊಡ್ಡ ಮಟ್ಟದಲ್ಲಿದೆ ಆ ಆಸ್ತಿ ವಕ್ಪ್ ಸಂಸ್ಥೆಗೆ ಏಕೆ ಸೇರಲ್ಲ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net