ಬಳ್ಳಾರಿ : ಜಿಲ್ಲೆಯ ಬಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿನ ಬಾಣಂತಿಯರ ಸಾವಿನ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.
ನಗರದ ಜಿಲ್ಲಾಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಬಾಣಂತಿಯರ ಸಾವಿನಿಂದ ರಾಜ್ಯವೇ ಬೆಚ್ಚಿ ಬಿದ್ದಿದೆ. ಈ ಸಾವಿಗೆ ಕಾಣದ ಕೈಗಳು ಕೆಲಸ ಮಾಡಿದ್ದು, ನಿಪಕ್ಷಪಾತವಾಗಿ ತನಿಖೆ ನಡೆಸಬೇಕು. ಬಾಣಂತಿಯರಿಗೆ ಐವಿ ಮೆಡಿಸಿನ್ ನೀಡಿದ ಪರಿಣಾಮ ಬಹು ಅಂಗಾಂಗ ವೈಪಲ್ಯದಿಂದ ಸಾವಿಗೀಡಾದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಆರು ತಿಂಗಳ ಹಿಂದಯೇ ಡ್ರಗ್ ಕಂಟ್ರೋಲರ್ ನಿಂದ ನಿಷೇಧಕ್ಕೆ ಒಳಪಟ್ಟ ಮೆಡಿಸನ್, ಯಾರ ಪ್ರಭಾವದಿಂದ ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ತಲುಪಿತು ಎಂದು ಪ್ರಶ್ನಿಸಿದರು. ಈ ಹಿಂದಯೇ ಡ್ರಗ್ ಬೇಡ ಅಂದರೂ ಕೂಡ ಸರ್ಕಾರ ಏಕೆ ಖರೀದಿಸಲಾಗಿದೆ. ಈ ಬಾಣಂತಿಯರ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಮೃತರ ಕುಟುಂಬಕ್ಕೆ ಕೇವಲ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದು ನಾಚಿಕೆಗೇಡಿನ ವಿಷಯವಾಗಿದೆ. ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಔಷಧಿ ಬಾಂಗ್ಲಾದೇಶದಲ್ಲಿ ತಯಾರಾಗಿ ಪಶ್ಚಿಮ ಬಂಗಾಳದಲ್ಲಿ ಶೀಲ್ ಹಾಗೂ ಸಹಿ ಮಾಡಲಾಗಿದೆ. ಇಂತಹ ಔಷಧಿಯನ್ನು ಕೊಟ್ಟು ಬಡವರ ಸಾವಿಗೆ ಸರ್ಕಾರವೇ ಕಾರಣವಾಗಿದೆ ಎಂದು ಕಿಡಿಕಾರಿದರು.
ಪಶ್ಚಿಮ ಬಂಗಾ ಫಾರ್ಮಸ್ಯುಟಿಕಲ್ ಕಂಪನಿ ಮಾಲೀಕ ಅನ್ಸಾರಿ ಅವರ ಹಣ ಬಲದಿಂದ ರಾಜ್ಯಕ್ಕೆ ನಿಷೇಧಿತ ಔಷಧಿ ಸರಬರಾಜಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೇವಲ ಹತ್ತು ತಿಂಗಳಲ್ಲೇ 111 ನವಜಾತು ಶಿಶುಗಳ ಮೃತಪಟ್ಟಿವೆ. ರಾಜ್ಯದಲ್ಲಿ ರೈತರ ಹಾಗೂ ಬಾಣಂತಿಯರ ಸಾವಿನ ನಡುವೆಯೂ ಹಾಸನದಲ್ಲಿ ಸಮಾವೇಶ ಮಾಡಲು ಕಾಂಗ್ರೆಸ್ ಹೊರಟಿದೆ. ಯಾವ ಪುರುಷಾರ್ಥಕ್ಕೆ ಸಮಾವೇಶ ಎಂದು ಗುಡುಗಿದರು. ಜಿಲ್ಲೆಯಲ್ಲಿ ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಸಿಎಂ, ಸಚಿವರು ಒಬ್ಬರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ವಾಗ್ದಳಿ ನಡೆಸಿದರು.