ಕನ್ನಡ ಉಳಿಸಿ ಬೆಳೆಸುವ ಕಿಚ್ಚು ಹೆಚ್ಚಾಗಲಿ

19 NMG 02 (6)
ನಾಗಮಂಗಲ ತಾಲೂಕಿನ ಗಡಿಭಾಗದಲ್ಲಿ ಮದ್ದೂರು ತಾಲೂಕಿನಿಂದ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
Published on

ನಾಗಮಂಗಲ : ಕನ್ನಡ ಭಾಷೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕನ್ನಡದ ಅಸ್ಮಿತೆ ನಮ್ಮ ಅಸ್ತಿತ್ವವಾಗಿದ್ದು ಪ್ರತಿಯೊಬ್ಬರಲ್ಲಿಯೂ ಕನ್ನಡ ಉಳಿಸಿ ಬೆಳೆಸುವ ಕಿಚ್ಚು ಹೆಚ್ಚಾಗಬೇಕು ಎಂದು ಬಿಇಒ ಯೋಗೇಶ್ ಹೇಳಿದರು.
ತಾಲೂಕಿನ ಗಡಿಭಾಗದಲ್ಲಿ ಮದ್ದೂರು ತಾಲೂಕಿನಿಂದ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸೋಮವಾರ ಸ್ವಾಗತಿಸಿ ಮಾತನಾಡಿದರು.
ಕನ್ನಡ ನಾಡು, ನುಡಿಯ ಹಬ್ಬವಾಗಿರುವ ಕನ್ನಡಾಂಬೆಯ ಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬ ಕನ್ನಡಿಗನ ಮೈ ಮನಸಿನಲ್ಲಿ ಕನ್ನಡದ ಅಭಿಮಾನ ಬಗ್ಗೆ ಕಿಚ್ಚು ಹೆಚ್ಚಾಗಬೇಕಿದೆ. ನಾವೆಲ್ಲರೂ ನಾಡು, ನುಡಿ, ಭಾಷೆ, ದೇಶ, ಸಂಸ್ಕೃತಿ ಉಳಿವಿಗಾಗಿ ಕನ್ನಡಾಂಬೆಯನ್ನು ಗೌರವಿಸಬೇಕಿದೆ. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಈಗಾಗಲೇ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಕೊಟ್ಟಿರುವ ಏಕೈಕ ಭಾಷೆ ಕನ್ನಡವಾಗಿದೆ. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇದು ಅತ್ಯಂತ ಹೆಮ್ಮೆಪಡುವ ವಿಷಯ ಎಂದರು.
ಅದ್ದೂರಿ ಸ್ವಾಗತ:
ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಜಾನಪದ ಕಲಾತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ತಾಲೂಕಿನ ತಟ್ಟಹಳ್ಳಿ, ದೇವಲಾಪುರ ಹ್ಯಾಂಡ್ ಪೋಸ್ಟ್ ಮೂಲಕ ನಾಗಮಂಗಲ ಪಟ್ಟಣಕ್ಕೆ ಆಗಮಿಸಿತು. ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಂಪು ಹಳದಿ ಶಾಲು ಧರಿಸಿಕೊಂಡು ಕೈಯಲ್ಲಿ ನಾಡಧ್ವಜ ಹಿಡಿದು ರಥದ ಜತೆ ಹೆಜ್ಜೆ ಹಾಕಿದರು. ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಕನ್ನಡಪರ ಸಂಘಟನೆಗಳ ಮುಖಂಡರು, ಕನ್ನಡ ಅಭಿಮಾನಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡಿ ಸ್ವಾಗತಕೋರಿ ಕನ್ನಡ ಪರ ಘೋಷಣೆಗಳನ್ನು ಕೂಗಿ ಪುಷ್ಪಾರ್ಚನೆಗೈದು ಹರ್ಷ ವ್ಯಕ್ತಪಡಿಸಿದರು.
ಬಳಿಕ ಸಂಜೆ ಬೋಗಾದಿ ಗ್ರಾಮಕ್ಕೆ ತಲುಪಿದ ರಥಯಾತ್ರೆ ವಾಸ್ತವ್ಯ ಹೂಡಿತು. ಆ.20 ರಂದು ರಥಯಾತ್ರೆಯನ್ನು ಕೆ.ಆರ್.ಪೇಟೆ ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ತಹಸೀಲ್ದಾರ್ ಕೆ.ಎಸ್. ಸೋಮಶೇಖರ್ ತಿಳಿಸಿದರು.

ತಾ.ಪಂ. ಇಒ ಸತೀಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಸಿಡಿಪಿಒ ಕೃಷ್ಣಮೂರ್ತಿ, ಜಾನಪದ ಅಕಾಡೆಮಿ ನಿರ್ದೇಶಕ ಅಣೆಚನ್ನಾಪುರ ಮಂಜೇಶ್, ಹಿರಿಯ ಸಾಹಿತಿ ನಾ.ಸು.ನಾಗೇಶ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನೂರಾರು ಸಾವರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net