

ಯಲ್ಲಾಪುರ: ವಿವಿಧ ಒಳಪಂಗಡಗಳ ಸಂಘಟನೆಗಳ ಪ್ರಾಬಲ್ಯದ ನಡುವೆ ಬ್ರಾಹ್ಮಣತ್ವ ಉಳಿವಿಗೆ, ಗುರುತಿಸಿಕೊಳ್ಳುವಿಕೆಗಾಗಿ ಬ್ರಾಹ್ಮಣ ಸಂಘಟನೆ ಬಲಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರ್ನಳ್ಳಿ ಹೇಳಿದರು.
ಪಟ್ಟಣದ ರೈತ ಸಭಾಭವನದಲ್ಲಿ ಅಖಿಲ ಬ್ರಾಹ್ಮಣ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಪ್ರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣರ ಕಡೆಗಣನೆ ಆಗಬಾರದು. ಬ್ರಾಹ್ಮಣರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಸಿಗಬೇಕು. ಆ ನಿಟ್ಟಿನಲ್ಲಿ ನಾನು ಸಂಘಟನೆ ನೇತೃತ್ವ ವಹಿಸಿಕೊಂಡ ನಂತರ, ಸಂಘಟನೆಯನ್ನು ವಿಕೇಂದ್ರೀಕರಣಗೊಳಿಸಿ ಬಲಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.
ಉತ್ತರ, ದಕ್ಷಿಣ ಭಾರತದ ಬ್ರಾಹ್ಮಣರನ್ನು ಒಗ್ಗೂಡಿಸಿ ವಧುಕ್ಷಾಮ ತೊಡೆದು ಹಾಕಲು ಪ್ರಯತ್ನ ಹೆಚ್ಚಬೇಕು. ಬ್ರಾಹ್ಮಣರಲ್ಲಿ ವಿವಾಹ ವಿಚ್ಛೇದನ ಸಮಸ್ಯೆ ಉಲ್ಬಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ದಾಂಪತ್ಯದಲ್ಲಿನ ಸಮಸ್ಯೆ ಬಗೆಹರಿಸಲು ಕೌನ್ಸೆಲಿಂಗ್ ಆರಂಭಿಸುವ ಚಿಂತನೆ ನಡೆದಿದೆ. ಬ್ರಾಹ್ಮಣರ ಮೇಲೆ ಸಾಂಸ್ಕೃತಿಕ ಆಕ್ರಮಣ ತಡೆಯಬೇಕು. ಬೇರೆಯವರನ್ನು ಟೀಕಿಸುವುದನ್ನು ಬಿಟ್ಟು ನಮ್ಮತನ ಉಳಿಸಿಕೊಳ್ಳುವ, ಪರಸ್ಪರ ಸಹಕಾರದ ಮನೋಭಾವ ಬೆಳೆಯಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬಹುಸಂಖ್ಯಾತ ಬ್ರಾಹ್ಮಣರ ಸಂಘಟನೆ ಬಲಗೊಳ್ಳಬೇಕು ಎಂದರು.
ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಅಖಿಲ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ರಾಜ್ಯ ಕಾರ್ಯಕಾರಿಣಿಯ ಜಿಲ್ಲಾ ಪ್ರತಿನಿಧಿಗಳಾದ ಕೆ.ಎಸ್. ಭಟ್ಟ ಆನಗೋಡ, ನಾರಾಯಣ ಹೆಗಡೆ ಕರಿಕಲ್, ಕುಮಾರಸುಬ್ರಹ್ಮಣ್ಯ ಭಟ್ಟ ಹಂಡ್ರಮನೆ, ಪ್ರಸಾದ ಹೆಗಡೆ, ಪ್ರಮುಖರಾದ ಪ್ರಮೋದ ಹೆಗಡೆ, ಗೋವಿಂದ ಭಟ್ ಅಚವೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ರಾಘವೇಂದ್ರ ಭಟ್ಟ, ಮಂಜುನಾಥ ಸಾಗರ, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಮುರಳಿಧರ ಬೆಂಗಳೂರು, ಮಹಾಸಭಾದ ತಾಲೂಕು ಸಂಚಾಲಕ ಟಿ. ಶಂಕರ ಭಟ್ಟ, ರಾಜ್ಯ ಸಮಿತಿಯ ಶ್ರೀಪಾದ ರಾಯ್ಸದ್, ಮಹಿಳಾ ವಿಭಾಗದ ಸಂಚಾಲಕಿ ಚಂದ್ರಕಲಾ ಭಟ್ ನಿರ್ವಹಿಸಿದರು. ಬ್ರಾಹ್ಮಣರ ಸವಾಲುಗಳು ಕುರಿತು ಗೋಷ್ಠಿ ನಡೆಯಿತು.