

ಶೃಂಗೇರಿ: ಭವಿಷ್ಯದ ಪ್ರಜೆಗಳಾಗಿರುವ ನೀವು ಸಂಸ್ಕಾರವಂತರಾಗಿದ್ದು, ಜಗದ್ಗುರುಗಳ ಆದೇಶದಂತೆ ಪ್ರತಿ ದಿನವೂ ಸಂಧ್ಯಾವಂದನೆ ಮಾಡಬೇಕು ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಬಿ.ಎಲ್.ರವಿಕುಮಾರ್ ಹೇಳಿದರು.
ಅಡ್ಡಗದ್ದೆ ಗ್ರಾಮ ಪಂಚಾಯಿತಿಯ ಉಳುವೆಬೈಲು ಶ್ರೀಪ್ರಸನ್ನ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಯುವ ವಿಪ್ರ ವೇದಿಕೆ ಏರ್ಪಡಿಸಿರುವ ಏಳು ದಿನದ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ ಸಮಾಜವು ಇತರೆ ಸಮಾಜಕ್ಕೆ ಮಾದರಿಯಾಗುವಂತೆ ಶಿಸ್ತು ಬದ್ಧ ಜೀವನ ನಡೆಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ, ಶಿಕ್ಷಣದೊಂದಿಗೆ ಧರ್ಮಾನುಷ್ಠಾನವನ್ನು ಕಡ್ಡಾಯವಾಗಿ ಪಾಲಿಸಬೇಕು. ಗುರು ಹಿರಿಯರಿಗೆ ಗೌರವ ನೀಡುವುದು, ಪ್ರತಿ ದಿನ ಬೆಳಗ್ಗೆ ಬೇಗ ಏಳುವುದು, ನಮ್ಮ ಕೆಲಸವನ್ನು ನಾವೇ ಮಾಡಿಕೊಂಡು ಜೀವನದಲ್ಲಿ ಶಿಸ್ತು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ವಿಪ್ರ ವೇದಿಕೆ ಅಧ್ಯಕ್ಷ ನೇತ್ರವಳ್ಳಿ ನಾಗಾನಂದ ಮಾತನಾಡಿ, ಯುವ ವಿಪ್ರ ವೇದಿಕೆ ಪ್ರತಿ ವರ್ಷವೂ ಸಾಮೂಹಿಕ ಉಪನಯನ ಏರ್ಪಡಿಸುತ್ತಿದೆ. ನಮ್ಮ ಸಂಸ್ಕಾರದಲ್ಲಿ ಒಂದಾದ ಬ್ರಹ್ಮೋಪದೇಶವನ್ನು ತಮ್ಮ ಮನೆಯಲ್ಲಿ ಮಾಡಲು ಆರ್ಥಿಕ ಅಥವಾ ಬೇರೆ ಕಾರಣದಿಂದ ಸಾಧ್ಯವಾಗುವುದಿಲ್ಲ. ಅಂಥಹ ವಿಪ್ರರಿಗೆ ಅನುಕೂಲವಾಗುವಂತೆ ಉಪನಯನ ಶಾಸ್ತ್ರೋಕ್ತವಾಗಿ ಮಾಡುವುದಲ್ಲದೇ, ಉಪನಯನದ ನಂತರ ಸಂಸ್ಕಾರ ಶಿಬಿರ ಆಯೋಜಿಸಲಾಗುತ್ತಿದೆ. ವಿಪ್ರ ಬಾಂಧವರು ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ, ಶಿಬಿರದ ಉಪಯೋಗ ಪಡೆಯಬೇಕು ಎಂದರು.
ಸುಂಕುರ್ಡಿ ನಂದಕುಮಾರಭಟ್ಟ, ಬೆಟ್ಟಗದ್ದೆ ಸುಧೀಂದ್ರ, ಬಾಲಗಂಗಾಧರ್, ರಾಮಮೂರ್ತಿ, ಅಣ್ಣುಕೊಡಿಗೆ ಶ್ರೀಧರರಾವ್ ಇದ್ದರು.