ಬೆಟ್ಟಿಂಗ್​ಗೆ ಬೀಳುವುದೆ ಕೊಡಲಿ?

H4 Betting 1
Published on

ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಪೊಲೀಸರು ಹೆಚ್ಚು ಕಡಿಮೆ ದಿನಾಲೂ ದಾಳಿ ಮಾಡಿ ಬಂಧಿಸುತ್ತಿದ್ದರೂ ಜೂಜಿಗೆ ಕಡಿವಾಣ ಬಿದ್ದಿಲ್ಲ. ಏಕೆಂದರೆ, ಪೊಲೀಸರ ಕೈಗೆ ಸಿಗುವವರೆಲ್ಲ ಸಾಮಾನ್ಯ ಬುಕ್ಕಿಗಳು. ಬೆಟ್ಟಿಂಗ್ ಕಿಂಗ್​ಪಿನ್ ಮತ್ತು ಪ್ರಮುಖ ಬುಕ್ಕಿಗಳು ಈಗಲೂ ಸುರಕ್ಷಿತವಾಗಿದ್ದಾರೆ. ಕ್ರಿಕೆಟ್ ಜೂಜಿನ ಹಿಂದಿರುವ ಜಾಲ ಮತ್ತು ಮೂಲವನ್ನು ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಮುಂಬೈ, ಗೋವಾ, ರಾಜಸ್ಥಾನ, ಗುಜರಾತ್​ಗಳಿಂದ ನೇರ ‘ಬೆಟ್ಟಿಂಗ್ ಲೋಡ್’ ಪಡೆಯುವ ಪ್ರಮುಖ ಬುಕ್ಕಿಗಳು ಐಪಿಎಲ್ ಪಂದ್ಯಾವಳಿಗಳ ಮೇಲೆ ಕೋಟ್ಯಂತರ ರೂ.ಗಳ ಬಾಜಿ ಕಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ದಂಧೆಕೋರರ ದೊಡ್ಡ ನೆಟ್​ವರ್ಕ್ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಬೆಟ್ಟಿಂಗ್​ಗಾಗಿ ತಮ್ಮದೇ ವಿಶೇಷ ಆಪ್​ಗಳನ್ನು ತಯಾರಿಸಿಕೊಂಡಿದ್ದಾರೆ. ಹುಬ್ಬಳ್ಳಿಯು ಈ ಜಾಲದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ನೂತನ ಪೊಲೀಸ್ ಆಯುಕ್ತ ಲಾಬು ರಾಮ್ ನೇತೃತ್ವದಲ್ಲಿ ಅವಳಿ ನಗರ ಪೊಲೀಸರು ಕರಾಳ ದಂಧೆಯ ಮೂಲಕ್ಕೆ ಕೈ ಹಾಕುವರೇ ಎಂಬ ಕುತೂಹಲ ಮೂಡಿದೆ.

ರಾಜ್ಯಕ್ಕೆ ಒಬ್ಬ ಅಥವಾ ಇಬ್ಬರು ಪ್ರಮುಖ ಬುಕ್ಕಿಗಳು ಇರುತ್ತಾರೆ. ಅವರ ವ್ಯಾಪ್ತಿಯಲ್ಲಿ ಎರಡನೇ ಸ್ತರದ ಬುಕ್ಕಿಗಳಿರುತ್ತಾರೆ. ಇವರಿಂದ ಪ್ರಮುಖ ಬುಕ್ಕಿ ಪ್ರತಿ ಪಂದ್ಯಕ್ಕೆ ಹತ್ತಿಪ್ಪತ್ತು ಲಕ್ಷ ರೂ. ಮುಂಗಡ ಪಡೆದಿರುತ್ತಾನೆ. 2ನೇ ಹಂತದ ಬುಕ್ಕಿಗಳಿಗೆ 1ರಿಂದ 5 ಲಕ್ಷ ರೂ.ವರೆಗೆ ಮುಂಗಡ ನೀಡುವ ಮೂರನೇ ಸ್ತರದ ಬುಕ್ಕಿಗಳು ಜೂಜುಕೋರರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ ಎನ್ನಲಾಗುತ್ತದೆ.

ಹುಬ್ಬಳ್ಳಿಯಲ್ಲಿ ಬುಕ್ಕಿಯಾಗಿದ್ದು, ಒಂದೆರಡು ಸಲ ಪೊಲೀಸ್ ಠಾಣೆ ಕಂಡುಬಂದಿರುವವರು ಮತ್ತೆ ಇಲಾಖೆ ಕಣ್ಣಿಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಸ್ಥಳ ಬದಲಾಯಿಸತೊಡಗಿದ್ದಾರೆ. ಗ್ರಾಮೀಣ ಭಾಗ ಮತ್ತು ಉತ್ತರ ಕನ್ನಡ, ಗದಗ, ಹಾವೇರಿ ಮತ್ತಿತರ ಸ್ಥಳಗಳಿಗೆ ಹೋಗುತ್ತಿದ್ದಾರೆ. ಬೇರೆ ಊರಿನಲ್ಲಿ ಮುಖ ತೋರಿಸುವುದು ಕಷ್ಟವಾಗಿರುವ ಕೆಲವು ಬುಕ್ಕಿಗಳು ಇಲ್ಲಿಗೆ ಬರುತ್ತಾರೆ. ಇನ್ನು ಕೆಲ ಅಧಿಕಾರಿ- ಸಿಬ್ಬಂದಿ ಬುಕ್ಕಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದೂ ಇದೆ ಎಂಬ ಆರೋಪವಿದೆ.

ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಪ್ರಮುಖ ಬುಕ್ಕಿಗಳನ್ನು ಬಂಧಿಸಲಾಗಿತ್ತು. ಆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಅದಾದ ಮೇಲೆ ಕೆಲ ಬುಕ್ಕಿಗಳು ತೆರೆಮರೆಗೆ ಸರಿದಿದ್ದರು. ಈಗ ಮತ್ತೆ ಚುರುಕಾಗಿ ಹಳೇ ಚಾಳಿ ಮುಂದುವರಿಸಿದ್ದಾರೆ. ಹು-ಧಾ ಅವಳಿ ನಗರದಲ್ಲಿ ಮೂರೂ ಸ್ತರದ ಬುಕ್ಕಿಗಳಿದ್ದಾರೆ. 18 ಜನ ನಂಬರ್ 1 ಬುಕ್ಕಿಗಳಿದ್ದು, 48 ನಂಬರ್ 2 ಹಾಗೂ 100ಕ್ಕೂ ಅಧಿಕ ಮಂದಿ ಮೂರನೇ ಹಂತದವರಿದ್ದಾರೆ ಎನ್ನುತ್ತವೆ ಮೂಲಗಳು.

ಐಪಿಎಲ್ ವೇಳೆ ಬೆಟ್ಟಿಂಗ್​ನಲ್ಲಿ ನಷ್ಟ ಹೊಂದಿದ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಮತ್ತೆ ಕೆಲವರು ಮಾನಸಿಕ ರೋಗಿಗಳಾಗಿದ್ದಾರೆ. ಹಾಗಾಗಿ, ನೂತನ ಪೊಲೀಸ್ ಆಯುಕ್ತರು ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತವನ್ನು ಬುಡಸಮೇತ ಕಿತ್ತೆಸೆದು ಪುಣ್ಯ ಕಟ್ಟಿಕೊಳ್ಳಬಹುದಾಗಿದೆ.

ಬುಕ್ಕಿಗಳ ಮೇಲೆ ಮಟ್ಕಾ ಕೇಸ್

ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿಸಿದ ಬುಕ್ಕಿಗಳ ಮೇಲೆ ಪೊಲೀಸರು ಮಟ್ಕಾ ಪ್ರಕರಣದಂತೆ ಕೆಪಿ ಆಕ್ಟ್ ಕಲಂ 78(3)ರಡಿ ಪ್ರಕರಣ ದಾಖಲಿಸುತ್ತಾರೆ. ಹೀಗಾಗಿ ಠಾಣೆಯಲ್ಲೇ ಜಾಮೀನು ಪಡೆದು ಹೊರಬರುವ ಆರೋಪಿಗಳು ಮತ್ತದೇ ಚಾಳಿ ಮುಂದುವರಿಸುತ್ತಾರೆ. ಅದರ ಬದಲು ಐಪಿಸಿ ಕಲಂ 420 ಅಡಿ ವಂಚನೆ ಪ್ರಕರಣ ಅಥವಾ ಐಟಿ ವಂಚನೆ (ಸೈಬರ್) ಪ್ರಕರಣ ದಾಖಲಿಸಿಕೊಂಡು ಕಂಬಿ ಹಿಂದೆ ತಳ್ಳುವ ಕುರಿತು ಇಲಾಖೆಯಲ್ಲಿ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಲೇನ್ ಮಷಿನ್ ಬದಲು ಆಪ್ ಬಳಕೆ

ಈ ಮೊದಲು ಲೇನ್ ಮಷಿನ್ ಬೆಟ್ಟಿಂಗ್​ನ ಪ್ರಮುಖ ಸಾಧನವಾಗಿತ್ತು. ಲೇನ್ ಮಷಿನ್ ಸೂಟ್​ಕೇಸ್ ಇಟ್ಟುಕೊಂಡೇ ಬೆಟ್ಟಿಂಗ್ ಆಡಬೇಕಿತ್ತು. ಆದರೆ ಇತ್ತೀಚೆಗೆ ತರಹೇವಾರಿ ಆಪ್​ಗಳು ಬಂದಿವೆ. ಬೆಟ್ಟಿಂಗ್ ಕುಳಗಳು ಮೊಬೈಲ್ ಕರೆಗಳು ಮತ್ತು ಆಪ್ ಮೂಲಕ ಜೂಜಿನಲ್ಲಿ ಆಸಕ್ತರಿಂದ ರನ್, ವಿಕೆಟ್, ಪಂದ್ಯದ ಸೋಲು-ಗೆಲುವಿನ ಮೇಲೆ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಾರೆ.

ಉದ್ಧಾರವಾದವರಿಲ್ಲ...

ಕ್ರಿಕೆಟ್ ಬೆಟ್ಟಿಂಗ್ ಅಪ್ಪಟ ಜೂಜು. ಇದರಲ್ಲಿ ಮೋಸವೂ ಇದೆ. ಬೆಟ್ಟಿಂಗ್​ನಲ್ಲಿ ಹಣ ಹೂಡಿ ಉದ್ಧಾರವಾದವರು ಯಾರೂ ಇಲ್ಲ ಎನ್ನುತ್ತಾರೆ ಈ ದಂಧೆಯನ್ನು ಹತ್ತಿರದಿಂದ ಬಲ್ಲವರು. ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಪಾತಕಿ ದಾವೂದ್ ಇಬ್ರಾಹಿಂ ಕ್ರಿಕೆಟ್ ಬೆಟ್ಟಿಂಗ್​ನ ಮೂಲ ಎನ್ನಲಾಗುತ್ತದೆ. ಅಂದರೆ, ಜೂಜಿನ ಆಸೆಗೆ ಬಿದ್ದವರು ಪರೋಕ್ಷವಾಗಿ ದಾವೂದ್ ಗಿರಾಕಿಯಾಗುತ್ತಾರೆ. ಹೀಗಾಗಿ ಬೆಟ್ಟಿಂಗ್ ದೇಶದ್ರೋಹಿ ಚಟುವಟಿಕೆ ಎಂಬ ಅಭಿಪ್ರಾಯವೂ ಇದೆ.

ಹು-ಧಾ ಅವಳಿ ನಗರದಲ್ಲಿ ಈಗಾಗಲೇ ಹಲವು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ಭೇದಿಸಿ ಅನೇಕ ಬುಕ್ಕಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಗಳ ಜಾಡು ಹಿಡಿದು ಪ್ರಮುಖ ಬುಕ್ಕಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.| ಲಾಬು ರಾಮ್ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net