

ಹುಣಸೂರು: ತೆಂಗು ಕೃಷಿಯ ರೈತರನ್ನು ಸತತವಾಗಿ ಕಾಡುತ್ತಿರುವ ಕಪ್ಪು ತಲೆ ಹುಳು ರೋಗಬಾಧೆ ನಿಯಂತ್ರಣಕ್ಕೆ ತೋಟಗಾರಿಕಾ ಇಲಾಖೆ ಅಭಿವೃದ್ಧಿಪಡಿಸಿರುವ ಔಷಧವನ್ನು ಉಚಿತವಾಗಿ ಪಡದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೆಂಗುಬೆಳೆಗಾರರಿಗೆ 2023-24 ನೇ ಸಾಲಿನ ತೆಂಗು ನಿರ್ವಹಣೆ ಯೋಜನೆಯಲ್ಲಿ ರೈತರಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿದರು.
ಮೈಸೂರು ಜಿಲ್ಲೆಯ ಮೈಸೂರು, ಹುಣಸೂರು ಮತ್ತು ನಂಜನಗೂಡು ತಾಲೂಕನ್ನು ಕಳೆದ ಸಾಲಿನಲ್ಲಿ ತೆಂಗು ನಿರ್ವಹಣೆ ಯೋಜನೆಯಡಿ 430 ಫಲಾನುಭವಿಗಳನ್ನು ಇಲಾಖೆ ನಿರ್ದೇಶನದ ಮೇಲೆ ಆಯ್ಕೆ ಮಾಡಲಾಗಿದೆ. ಎರಡು ವರ್ಷ ಇಲಾಖೆಯಿಂದ ತೋಟ ನಿರ್ವಹಣೆಗೆ ಅಗತ್ಯ ಔಷಧೋಪಚಾರವನ್ನು ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 200 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿಗೆ ಕಪ್ಪುಹುಳು ಬಾಧೆ ಕಾಡುತ್ತಿದ್ದು, ಇದರಿಂದ ತೆಂಗಿನಮರದ ಗರಿಗಳು ಕಜ್ಜಿ ಹತ್ತಿದಂತೆ ಕಾಣಿಸುತ್ತಿದೆ. ಗರಿಗಳಲ್ಲಿ ಹಸಿರನ್ನು ಕಪ್ಪುತಲೆಹುಳ ತಿನ್ನುವುದರಿಂದ ಒಣಗುತ್ತಿವೆ. ರೈತರು ಒಂದೆರಡು ಮರಗಳಲ್ಲಿ ಈ ರೀತಿ ಗೋಚರಿಸಿದಲ್ಲಿ ಇಲಾಖೆ ಸಂಪರ್ಕಿಸುವುದರಿಂದ ರೋಗ ಹತೋಟಿಗೆ ತರಲು ಸಹಕಾರವಾಗಲಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ತಾಲೂಕಿನ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿನ ತೆಂಗಿನತೋಟದಲ್ಲಿ ಈ ರೋಗಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದೆ. ತೇವಾಂಶ ಹೆಚ್ಚು ಒಣಹವೆ ಇರುವ ಪ್ರದೇಶದ ತೆಂಗಿನ ತೋಟಗಳಲ್ಲಿ ಕಪ್ಪುತಲೆಹುಳು ಬಾಧೆ ಹೆಚ್ಚಾಗಿದೆ. ಕ್ಷೇತ್ರದ ಹುಣಸೂರು, ಕಟ್ಟೆಮಳಲವಾಡಿ, ತೊಂಡಾಳು, ರಾಮಪಟ್ಟಣ, ಕಿರುಜಾಜಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ರೋಗಬಾಧೆ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ರೈತರಾದ ಗಿರೀಶ್, ಬಾಲಗಂಗಾಧರ, ಮಲ್ಲಮಣಿ, ರಾಮಶೆಟ್ಟಿ, ಕುಮಾರ್, ಮಹೇಶ್, ವಿದ್ಯಾರಾಜೇ ಅರಸು, ಅನಿಲ್ ಕುಮಾರ್ , ಶಿವಕುಮಾರ್, ಶಶಿಧರ್ ಅರಸು, ಮಹದೇವ್, ಹೊಸೂರು ಅಣ್ಣಯ್ಯ ಸೇರಿದಂತೆ ಇಲಾಖೆ ಅಧಿಕಾರಿಗಳಾದ ರವಿ, ಹೊಂಬೇಗೌಡ, ನಿತಿನ್, ಫಯಾಜ್ ಪಾಶಾ ಇದ್ದರು.