ಫಲಾನುಭವಿಗಳು ಸವಲತ್ತು ಸದ್ಬಳಕೆ ಮಾಡಿಕೊಳ್ಳಲಿ

ಫಲಾನುಭವಿಗಳು ಸವಲತ್ತು ಸದ್ಬಳಕೆ ಮಾಡಿಕೊಳ್ಳಲಿ
Published on

ಹಾಸನ: ಕಾರ್ಮಿಕ ವರ್ಗಗಳಿಗೆ ಸಾಮಾಜಿಕ, ಆರ್ಥಿಕ, ಸಂಘಟನಾತ್ಮಕವಾಗಿ ಸವಲತ್ತು ನೀಡುವ ಸಲುವಾಗಿ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ಸಾಲಗಾಮೆ ರಸ್ತೆಯ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 101 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು, ಸುಮಾರು 30 ರಿಂದ 40 ಲಕ್ಷ ಕಾರ್ಮಿಕರು ಇದರಲ್ಲಿ ಒಳಗೊಂಡಿದೆ. ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ 25,45,607 ಕಾರ್ಮಿಕರು ನೋಂದಣಿಯಾಗಿದ್ದು, ಹಾಸನ ಜಿಲ್ಲೆಯಿಂದ 45,262 ಕಾರ್ಮಿಕರು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದರು.

ಗಿಗ್ ಕಾರ್ಮಿಕರಿಗೆ ತಲಾ 2 ಲಕ್ಷ ರೂ. ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು 4 ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸುವ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಜಾರಿಗೊಳಸಲಾಗುತ್ತಿದೆ. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೊಳಿಸಲಾಗಿದ್ದು, ಹಾಸನ ಜಿಲ್ಲೆಯಲ್ಲಿ ಈವರೆಗೆ 83 ಅಪಘಾತ ಪ್ರಕರಣಗಳಲ್ಲಿ 3.24 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದರು.

ಪತ್ರಿಕೆ ವಿತರಿಸುವ ಕಾರ್ಮಿಕರಿಗೆ 2 ಲಕ್ಷ ರೂ. ಅಪಘಾತ ಪರಿಹಾರ ಹಾಗೂ 1 ಲಕ್ಷ ರೂ. ವರೆಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಯೋಜನೆ ಜಾರಿಗೊಳಿಸಲಾಗಿದೆ. ಈವರೆಗೆ 6720 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, 122 ಕಾರ್ಮಿಕರಿಗೆ ಸ್ಮಾಟ್ ಕಾರ್ಡ್ ವಿತರಿಸಲಾಗಿದೆ. ಮೋಟಾರು, ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ಹಾಸನ ಜಿಲ್ಲೆಯಲ್ಲಿ 37,820 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿದ್ದು ಸವಲತ್ತು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ರಾಜ್ಯ ಸರ್ಕಾರದಿಂದ ಜನ ಸಾಮಾನ್ಯರ ಜೀವನಕ್ಕೆ ಗ್ಯಾರಂಟಿ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಕಾರ್ಮಿಕರ ಸ್ಥಿತಿಗತಿಗಳನ್ನು ಅರಿತು ದುಡಿಯುವ ಅಸಂಘಟಿತ ಕಾರ್ಮಿಕ ವರ್ಗಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಾಗುತ್ತಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಮುತುವರ್ಜಿ ವಹಿಸಿ ಅಸಂಘಟಿತ ಕಾರ್ಮಿಕರ ಪರವಾಗಿ ನೂತನ ಮಸೂದೆ ತಂದು ಸವಲತ್ತು ತಂದಿದ್ದಾರೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವಸತಿ ಶಾಲೆ ತರುವ ಯೋಜನೆ ತರುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಅಸಂಘಟಿತ ಕಾರ್ಮಿಕ ವರ್ಗಗಳ ಪಟ್ಟಿಯಲ್ಲಿ 101 ಕ್ಷೇತ್ರವನ್ನು ಸೇರಿಸುವಲ್ಲಿ ಸಂತೋಷ್ ಲಾಡ್ ಅವರ ಪಾತ್ರ ದೊಡ್ಡದಿದ್ದು, ಕಾರ್ಮಿಕ ವರ್ಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕಾರ್ಮಿಕರ ಏಳಿಗೆಗಾಗಿ ತಂದಿರುವ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು. ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮುತುವರ್ಜಿ ವಹಿಸಲಿ ಎಂದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕಾರ್ಮಿಕ ವರ್ಗಕ್ಕೆ ಸಂತೋಷ್‌ಲಾಡ್ ಅವರ ಕೊಡುಗೆ ಅಪಾರ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ಕಡೂರು ಶಾಸಕ ಆನಂದ್, ಮೊಹಿಸಿದ್ದೀನ್, ಎಚ್.ಎನ್.ಬಾಲಕೃಷ್ಣ, ಗುರುಪ್ರಸಾದ್ ಇತರರಿದ್ದರು.

ಸರ್ಕಾರದಿಂದ ಶೇ.50 ವೇತನ: ಸರ್ಕಾರದ ಆಶಾದೀಪ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡ ದಲಿತ ಕೆಲಸಗಾರರಿಗೆ ಶೇ.50ರಷ್ಟು ಸಂಬಳವನ್ನು 2 ವರ್ಷದವರೆಗೆ ಸರ್ಕಾರದಿಂದ ನೀಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಿಸಿದರು.

ಯಾವುದೇ ಕೆಲಸದ ಸ್ಥಳದಲ್ಲಿ ದಲಿತರು ನೇಮಕವಾದರೆ ಅವರಿಗೆ ಸರ್ಕಾರದಿಂದ ಶೆ.50ರಷ್ಟು ವೇತನ ನೀಡಲಾಗುತ್ತದೆ. ಇದರಿಂದ ಹಿಂದುಳಿದ ವರ್ಗದವರನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net