ಬೇಡ್ತಿ-ವರದಾ ನದಿ ಜೋಡಣೆ ಕಾಮಗಾರಿ ಆರಂಭಕ್ಕೆ ಮುಂದಾಗಲಿ

18 hnl 2
Published on

ಹಾನಗಲ್ಲ: ಕರ್ನಾಟಕದ ಬೇಡ್ತಿ-ವರದಾ ನದಿ ಜೋಡಣೆಗೆ ಸಂಸದ ಬಸವರಾಜ ಬೊಮ್ಮಾಯಿ ಆದ್ಯತೆ ನೀಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹಾದಿಮನಿ, ಬೇಡ್ತಿ-ವರದಾ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ.ಕೋತಂಬರಿ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

7 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಬೇಡ್ತಿ-ವರದಾ ನದಿ ಜೋಡಣೆಗೆ ಕೇಂದ್ರ ಸರ್ಕಾರದಲ್ಲಿ ನಿರ್ಣಯಿಸಿ ಕಾಮಗಾರಿ ಆರಂಭಿಸಲು ಮುಂದಾಗಬೇಕು. ಇದು ರೈತ ಸಮುದಾಯದ ಒತ್ತಾಸೆಯಾಗಿದೆ. ಬರಗಾಲದಿಂದ ಬಳಲದಿರಲು ಇಂಥ ನದಿ ಜೋಡಣೆಗೆ ಮಾಜಿ ಪ್ರಧಾನಿ ದಿ. ಅಟಲ್‌ಬಿಹಾರಿ ವಾಜಪೇಯಿ ಅವರ ದೂರದೃಷ್ಟಿ ಸಾಕಾರವಾಗಬೇಕಾಗಿದೆ. 2 ದಶಕಗಳಿಂದ ಬೇಡ್ತಿ ವರದಾ ನದಿ ಜೋಡಣೆಗೆ ಹೋರಾಟ ನಡೆದಿದೆ. ಅದು ನೀರಾವರಿ ತಜ್ಞ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಸಾಕಾರವಾಗುತ್ತದೆ ಎಂಬ ವಿಶ್ವಾಸ ರೈತರಲ್ಲಿದೆ. ಕಡಿಮೆ ವೆಚ್ಚದ ಅತಿ ದೊಡ್ಡ ನೀರಾವರಿ ಯೋಜನೆ ಇದಾಗಿದೆ. ಬುಧವಾರ ಹಾನಗಲ್ಲಿಗೆ ಆಗಮಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಅಕ್ರಮ-ಸಕ್ರಮ ಯೋಜನೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಹೊಸ ನಿಯಮಾವಳಿ ರೂಪಿಸಿರುವುದು ರೈತ ವಿರೋಧಿ ನೀತಿಯಾಗಿದೆ. ಇದು ತೀರ ದುಬಾರಿಯೂ ಹೌದು. ಕೂಡಲೆ ಅಕ್ರಮ-ಸಕ್ರಮ ಮೊದಲ ನಿಯಮವನ್ನೇ ಮುಂದುವರಿಸಲಿ ಎಂದು ಒತ್ತಾಯಿಸಿದರು.
ಬೆಳೆ ವಿಮಾ ಕಂಪನಿಗಳ ಲೆಕ್ಕಾಚಾರದಲ್ಲಿ ಬೆಳೆ ವಿಮೆ ರೈತರ ಪಾಲಿಗೆ ಜೂಜಾಟವಾಗಿದೆ. ಮೋಸದ ಮೂಲಕ ರೈತರನ್ನು ದಾರಿ ತಪ್ಪಿಸಿ ಬೆಳೆ ವಿಮೆ ಸರಿಯಾಗಿ ಲೆಕ್ಕಾಚಾರವಾಗದೇ ರೈತರು ಬೆಳೆ ವಿಮೆ ಕಟ್ಟಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರೈತರ ಸಹಾಯಕ್ಕೆ ಬಾರದ ಬೆಳೆ ವಿಮೆಯಿಂದ ಯಾರಿಗೆ ಲಾಭ?. ಬೆಳೆ ವಿಮೆ ಪರಿಹಾರದಲ್ಲಿಯೂ ಅನ್ಯಾಯ, ತಾರತಮ್ಯವಾಗುತ್ತಿದೆ. ಹಾನಗಲ್ಲ, ಬ್ಯಾಡಗಿ ಶಿಗ್ಗಾಂವಿ ತಾಲೂಕುಗಳಿಗೆ ಮಧ್ಯಂತರ ಬೆಳೆ ಪರಿಹಾರ ಬರಲಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕೃಷಿ ಉತ್ಪಾದನೆಯ ವೆಚ್ಚವೂ ಹೆಚ್ಚಾಗಿ ಮತ್ತೆ ರೈತನ ಮೇಲೆಯೇ ಬರೆ ಹಾಕುವ ಸಂದರ್ಭ ಇದಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಬಸವರಾಜ ಹಾದಿಮನಿ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮುತ್ತಪ್ಪ ಪವಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net