ಸಮಾಜ ಸುಧಾರಣೆಗೆ ಮುಂದಾಗಲಿ ಬಣಜಿಗರು

SGN BANAJIGA SAMAJ
Published on

ಶಿಗ್ಗಾಂವಿ: ಸಮಾನತೆಯ ಸಂದೇಶ ಸಾರಿದ 12ನೇ ಶತಮಾನದ ಬಸವಣ್ಣನವರ ತತ್ವ-ಸಿದ್ಧಾಂತ, ಮಾರ್ಗದರ್ಶನದಲ್ಲಿ ಬಣಜಿಗ ಸಮಾಜ ಇಂದಿಗೂ ನಡೆದುಕೊಳ್ಳುತ್ತಿದೆ. ಬಸವಣ್ಣನವರ ಆದರ್ಶ ಗುಣಗಳನ್ನು ನಮ್ಮ ಮುಂದಿನ ಪೀಳಿಗೆಯವರು ಅಳವಡಿಸಿಕೊಳ್ಳುವ ಮೂಲಕ ಸಮಾಜ ಕಟ್ಟಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ಹನುಮಂತಗೌಡ್ರು ಕಲ್ಯಾಣ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿಗ್ಗಾಂವಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ಶಾಖೆ, ತಾಲೂಕು ಸಮಾವೇಶ ಹಾಗೂ 2023-24ನೆ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಿತಿವಂತರಿರುವ ನಮ್ಮ ಬಣಜಿಗರು, ಸಮಾಜದ ಬಡವರು, ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದರು.

ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ಯುಗಕ್ಕೆ ಹೊಂದಿಕೊಂಡು, ಕೇವಲ ವ್ಯಾಪಾರೀಕರಣ ಮನೋಭಾವ ಹೊಂದದೆ, ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜಮುಖಿ ಚಿಂತನೆಗಳೊಂದಿಗೆ ಬೆರೆತುಕೊಳ್ಳಬೇಕು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದ ಆರ್ಥಿಕತೆಯ ಪ್ರಮುಖ ಕೊಂಡಿಯಾಗಿರುವ ಲಿಂಗಾಯತ ಸಮಾಜದ ಒಳಪಂಗಡವಾಗಿರುವ ಬಣಜಿಗ ಸಮಾಜ ಈ ನಾಡಿಗೆ ನೀಡಿದ ಕೊಡುಗೆಗಳು ಅನನ್ಯವಾದುದು. ಬಣಜಿಗ ಸಮಾಜದ ಮುಖಂಡರ ಸೌಹಾರ್ದಯುತ ವ್ಯಕ್ತಿತ್ವ, ಆದರ್ಶ ಗುಣಗಳು ನಮಗೆಲ್ಲ ಮಾರ್ಗದರ್ಶನವಾಗಿದೆ ಎಂದರು.

ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಬಣಜಿಗರ ಸೇವೆ, ತ್ಯಾಗ, ಸ್ವಾಮಿ ನಿಷ್ಠೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹುಟ್ಟಿನಿಂದಲೇ ಸಮಾಜ ಸೇವೆಯನ್ನು ಕರಗತ ಮಾಡಿಕೊಂಡು ಬೆಳೆದು ಬಂದಿರುವ ಬಣಜಿಗರು, ಯಾವುದೇ ಅಧಿಕಾರ, ಸಾಮಾಜಿಕ ಹುದ್ದೆಗೆ ಅಂಟಿಕೊಳ್ಳದೆ ಸದಾ ಧಾರ್ವಿುಕ ಕಾರ್ಯಗಳ ಮೂಲಕ ಅವರಿವರನ್ನದೆ ನಿರಂತರ ಸಮಾಜಸೇವೆ ಮಾಡುತ್ತಿದ್ದಾರೆ ಎಂದರು.

ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ, ಬರುಣಾಪುರ ಸಿದ್ಧಾರೂಢ ಮಠದ ಪರಮಪೂಜ್ಯ ಯೋಗೇಶ್ವರಿ ಮಾತಾಜಿ ಆಶೀರ್ವಚನ ನೀಡಿದರು. ಉದ್ಯಮಿ ಭರತ್ ಬೊಮ್ಮಾಯಿ ಮಾತನಾಡಿದರು. ಗಂಗಾಧರ ಮಾಮ್ಲೇಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಣಜಿಗ ಸಮಾರಂಭದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹೆಸರೂರ ಅಧ್ಯಕ್ಷತೆ ವಹಿಸಿದ್ದರು.

ಸಮಾಜದ ಹಿರಿಯರಿಗೆ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಲಿಂಗರಾಜ ಅಂಗಡಿ, ಕಿರಣ ಕೊಳ್ಳಿ, ಸಿದ್ದಲಿಂಗಪ್ಪ ಮಹಾರಾಜಪೇಟ, ಚನ್ನಬಸಪ್ಪ ಅಂಗಡಿ, ಚನ್ನವೀರಪ್ಪ ಶೆಟ್ಟರ, ಕುಮಾರ ಹತ್ತಿಕಾಳ, ಸಂಗನಬಸಪ್ಪ ಶೆಟ್ಟರ, ಬಸವರಾಜ ನೀರಲಗಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net