ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿ

tlk 21-2 shasaka
ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಶಾಸಕ ಅಪ್ಪಾಜಿ ನಾಡಗೌಡ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ ಮಾತನಾಡಿದರು. ತಾಲೂಕು ತಹಸೀಲ್ದಾರ್ ವಿನಯಾ ಹೂಗಾರ, ತಾಪಂ ಇಒ ನಿಂಗಪ್ಪ ಮಸಳಿ, ಬಿಇಒ ಬಿ.ಎಸ್. ಸಾವಳಗಿ, ಕೃಷಿ ಇಲಾಖೆ ಬಾವಿಕಟ್ಟಿ ಇತರರಿದ್ದರು.
Published on

ತಾಳಿಕೋಟೆ: ಅಧಿಕಾರಿಗಳು ಕಾರ್ಯನಿರ್ವಹಿಸುವಾಗ ಬದ್ಧತೆಯಿಂದ ಕಾರ್ಯನಿರ್ವಹಿಸುವ ಜತೆಗೆ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕೆಂದು ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ತಾಳಿಕೋಟೆ ತಾಪಂ, ಕೊಣ್ಣೂರ ಗ್ರಾಪಂ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಕ್ಷೇತ್ರಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರುವಂತಹ ಕೆಲಸ ಮಾಡುತ್ತಿದ್ದೇನೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ, ಅಲ್ಲದೆ, ನೀರಾವರಿ ಯೋಜನೆಗಳಿಗೂ ಅನುದಾನ ತಂದಿದ್ದೇನೆ. ಹಂತ ಹಂತವಾಗಿ ಎಲ್ಲ ಕೆಲಸಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಸ್ಕಿ ಫೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ(ಕೊಣ್ಣೂರ) ಮಾತನಾಡಿ, ಶಾಸಕರು ಕ್ಷೇತ್ರದ ಎಲ್ಲ ಗ್ರಾಮ ಪಟ್ಟಣಗಳಿಗೆ ಅನುದಾನ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಮುಂದಿನ ದಿನಗಳಲ್ಲಿ ಈ ಮುದ್ದೇಬಿಹಾಳ ಮಾದರಿಯ ಕ್ಷೇತ್ರವಾಗಲಿದೆ ಎಂದರು.

ಕೊಣ್ಣೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಮಾಡಲಾಗಿದ್ದು, ಕೇವಲ 2 ಇಂಚಿನ ಪೈಪ್ ಅಳವಡಿಸಲಾಗಿದೆ. ಇದರಿಂದಾಗಿ ಇಡೀ ಗ್ರಾಮದ ಜನರಿಗೆ ನೀರು ಸಿಗುತ್ತಿಲ್ಲ ಎಂಬ ದೂರು ಬಂದಾಗ ಸ್ಥಳದಲ್ಲಿದ್ದ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಹಿರೇಗೌಡ ಅವರಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಗುತ್ತಿಗೆದಾರನ ಬಿಲ್ ತಡೆ ಹಿಡಿಯಲು ಸೂಚಿಸಿದರು.

ಕೊಣ್ಣೂರ ಪ್ರಾಥಮಿಕ ಚಿಕಿತ್ಸೆ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂಬ ಜನರ ಬೇಡಿಕೆ ಹೆಚ್ಚಾಗುತ್ತಿದೆ. ಕೂಡಲೇ ಶಾಸಕರು ಈ ಕುರಿತು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮುದಾಯ ಆರೋಗ್ಯ ಕೇಂದ್ರದಡಿ ಸೇರಿಸಲು ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ ಮನವಿ ಮಾಡಿದರು.

ಅಲ್ಲದೆ, ಕೊಣ್ಣೂರ ಗ್ರಾಮವು ತಾಲೂಕಿನಲ್ಲೇ ದೊಡ್ಡದಾಗಿದ್ದು, ಹೋಬಳಿ ಮಾಡುವ ಜತೆಗೆ ರೈತರಿಗೆ ಬೀಜ, ಗೊಬ್ಬರ ಸಮರ್ಪಕವಾಗಿ ಸಿಗುವಂತೆ ಅನುಕೂಲ ಮಾಡಿಕೊಡಬೇಕೆಂದು ಮುಖಂಡ ತಾಳಿಕೋಟಿ ಆಗ್ರಹಿಸಬೇಕು.

ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಸಿ.ಎಸ್. ನಾಡಗೌಡ ಅವರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ತಾಲೂಕು ತಹಸೀಲ್ದಾರ್ ವಿನಯಾ ಹೂಗಾರ, ತಾಪಂ ಇಒ ನಿಂಗಪ್ಪ ಮಸಳಿ, ಬಿಇಒ ಬಿ.ಎಸ್. ಸಾವಳಗಿ, ಕೃಷಿ ಇಲಾಖೆ ಬಾವಿಕಟ್ಟಿ, ಎಂ.ಎಂ. ಬೆಳಗಲ್ಲ, ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ ತಿವಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net