

ಕುಂದಗೋಳ: ಮಳೆಗಾಲ ಆರಂಭವಾಗಿದ್ದು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನತೆಗೆ ಅನುಕೂಲವಾಗಲು ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಿವಾನಂದ ಬೆಂತೂರ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲ ಗ್ರಾಮಗಳಿಗೆ ಈಗಾಗಲೇ ಮೂರು ಬಸ್ಗಳನ್ನು ಬಿಡಿಸಲಾಗಿದೆ. ಉಳಿದ ಅಗತ್ಯ ಬಸ್ಗಳನ್ನೂ ಶೀಘ್ರದಲ್ಲಿ ಬಿಡಬೇಕು. ಸಾರ್ವಜನಿಕ ಬೇಡಿಕೆ ಮೇರೆಗೆ ಕೆಲ ತಂಗುದಾಣಗಳಲ್ಲಿ ಬಸ್ ನಿಲ್ಲಿಸಲು ಸೂಚನೆ ನೀಡಬೇಕು ಎಂದು ಹುಬ್ಬಳ್ಳಿ ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅವುಗಳ ದುರಸ್ತಿ ಕಾರ್ಯಕ್ಕೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಗೃಹಲಕ್ಷ್ಮಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದಾಗಿ ಯೋಗ್ಯತೆ ಪ್ರಮಾಣೀಕರಣವಾಗದಿದ್ದರೆ, ತಕ್ಷಣವೇ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು. ಯುವ ನಿಧಿ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳಿಗೆ ಕಾಲೇಜು ಮಟ್ಟದಲ್ಲಿ ಶಿಬಿರ ಏರ್ಪಡಿಸಿ ಯುವಜನತೆಗೆ ಯೋಜನೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದ ಬಗ್ಗೆ ತಹಸೀಲ್ದಾರ್ ರಾಜು ಮಾವರಕರ ಅವರನ್ನು ಪ್ರಶ್ನಿಸಿದರು. ಸಂಬಂಧಿತ ಅಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡಲಾಗಿದ್ದು, ತಾತ್ಕಾಲಿಕ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಮಾವರಕರ ಸ್ಪಷ್ಟನೆ ನೀಡಿದರು.
ಹೆಸ್ಕಾಂಗೆ ಸಂಬಂಧಿಸಿದಂತೆ ತರ್ಲಘಟ್ಟ ಗ್ರಾಮದ ಕೆಲವು ಜಮೀನಿನಲ್ಲಿ ವಿದ್ಯುತ್ ಕಂಬಗಳಿಂದ ಸಮಸ್ಯೆ ಉಂಟಾಗಿದೆ ಎಂಬ ಬಗ್ಗೆ ಸದಸ್ಯ ಅಡಿವೆಪ್ಪ ಹೆಬಸೂರ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಅಳವಡಿಕೆ ಬಗ್ಗೆ ಹಿಂದಿನ ಸಭೆಯಲ್ಲಿ ನಿರ್ಧಾರವಾದರೂ ಪ್ರಗತಿ ಇಲ್ಲದ ಹಿನ್ನೆಲೆಯಲ್ಲಿ, ಸಂಬಂಧಿಸಿದ ಇಲಾಖೆಗೆ ನೋಟಿಸ್ ನೀಡಬೇಕು ಎಂದು ತಾಪಂ ಇಒ ಜಗದೀಶ ಕಮ್ಮಾರ ಅವರಿಗೆ ಸೂಚನೆ ನೀಡಿದರು.
ಶಶಿಧರ ಸೋಮರಡ್ಡಿ, ಇರ್ಷಾದ್ ಮುಲ್ಲಾ, ಚಂದ್ರು ಕಾಳೆ, ಗೀತಾ ಕೋಟಿಗೌಡರ, ಇತರರಿದ್ದರು.