

ಬಳ್ಳಾರಿ: ಮನುಷ್ಯ ತನ್ನ ಅತಿಯಾದ ಆಮಿಷಗಳಿಂದಾಗಿ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದಾನೆ. ಇದು ನಿಲ್ಲಬೇಕು. ಇಲ್ಲದಿದ್ದರೆ ನಮ್ಮ ಬದುಕು ಸಂಕಷ್ಟಕ್ಕೆ ಈಡಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಪರಿಸರ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆಯ ತರಬೇತುದಾರೆ ಎಚ್.ಎಂ.ಲತಾ ನುಡಿದರು .
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಪರಿಸರ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ಲಾಸ್ಟಿಕ್ ನಿಷೇಧ ಮತ್ತು ಹವಾಮಾನ ಬದಲಾವಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ವಿನಾಶದ ಅಂಚಿಗೆ ತಲುಪುತಿದೆ. ದಿನಬಳಕೆಯ ವಸ್ತುಗಳನ್ನು ತರಲು ನಾವೆಲ್ಲರೂ ಪ್ಲಾಸ್ಟಿಕ್‌ನ ಮೊರೆ ಹೋಗುತ್ತಿದ್ದೇವೆ. ಅದು ನೆಲದಲ್ಲಿ ಸೇರಿಕೊಂಡು ಮಳೆ ನೀರನ್ನು ಇಂಗಿಕೊಳ್ಳಲಾರದಂತೆ ತಡೆಯುತ್ತದೆ. ಇದರಿಂದಾಗಿ ಅಂತರ್ಜಲ ಕುಸಿಯುತ್ತದೆ. ಸಹಜವಾಗಿಯೇ ನೀರಿನ ಸಮಸ್ಯೆ ಉದ್ಭವವಾಗುತ್ತದೆ ಎಂದು ಎಚ್ಚರಿಸಿದರು.
‘ಹವಾಮಾನ ಮತ್ತು ಬದಲಾವಣೆಗೆ ಕಾರಣಗಳು ’ ಎನ್ನುವ ವಿಷಯದ ಕುರಿತು ಮಾತನಾಡಿದ ಎ.ಎಂ.ರುಚಿತಾಶ್ರೀ, ನಾವು ಬಹಳ ಮುಖ್ಯವಾಗಿ ಕಾಡನ್ನು ನಾಶ ಮಾಡದೆ ಉಳಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲು ಹೆಚ್ಚು ಗಿಡ ಮರಗಳು ಹಸಿರಿನಿಂದ ನಳ ನಳಿಸುವ ಹಾಗೇ ನೋಡಿಕೊಳ್ಳಬೇಕು. ಇದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದರು. ಅರಣ್ಯಗಳನ್ನು ನಾಶ ಮಾಡುವುದರಿಂದ ನೀರು ,ಗಾಳಿ , ಆಹಾರದ ಸಮಸ್ಯೆಗಳು ತಲೆದೂರಿ ನಮ್ಮ ಬದುಕಿನ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತವೆ ಎಂದು ವಿಶ್ಲೇಷಿಸಿದರು .
ಇಕೋ ಕ್ಲಬ್‌ನ ಸಂಚಾಲಕ ಡಾ.ಪ್ರಹ್ಲಾದ ಚೌಧರಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಪರಿಸರದ ಬಗೆಗೆ ಹೊಸ ಅರಿವನ್ನು ಮೂಡಿಸಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಚ್.ಕೆ.ಮಂಜುನಾಥ್ ರೆಡ್ಡಿ, ಪ್ರತಿಯೊಬ್ಬರು ಒಂದೊಂದು ಗಿಡವನ್ನು ಬೆಳೆಸಬೇಕು. ಪ್ಲಾಸ್ಟಿಕನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಈ ನಿಯಮವನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕೆಂದರು .
ಪ್ರಾಧ್ಯಾಪಕರಾದ ಅಮರೇಗೌಡ, ಡಾ.ದಸ್ತಗೀರಸಾಬ್‌ದಿನ್ನಿ , ಡಾ.ಮೋನಿಕಾ ರಂಜನ್, ಡಾ.ಶೋಭಾರಾಣಿ, ಡಾ.ಕನ್ಯಾಕುಮಾರಿ, ಡಾ.ಪಲ್ಲವಿ , ಗುರುಬಸಪ್ಪ , ಘಂಟೆಪ್ಪ ಶೆಟ್ಟಿ , ದೊಡ್ಡ ಬಸವರಾಜ ಮುಂತಾದವರು ಉಪಸ್ಥಿತರಿದ್ದರು.