ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆ ಮಾಡುವಂತಾಗಲಿ

26 HANUR 2
ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಶಾಸಕ ಎಂ.ಆರ್ ಮಂಜುನಾಥ್ ತಟ್ಟೆ ಎಸೆಯುವ ಮೂಲಕ ಉದ್ಘಾಟಿಸಿದರು. ಮಂಜುನಾಥ್ ಪ್ರಸನ್ನ, ಶಿವರಾಜು, ಯೋಗೇಶ್, ತಾರಾನಾಥ್, ಜಯಪ್ರಕಾಶ್, ಮಹದೇವ ಇತರರು ಇದ್ದರು.
Published on

ಹನೂರು: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗಳಿಸಿರುವುದು ದೇಶದ ಹೆಗ್ಗಳಿಕೆ. ಇದೇ ಮಾದರಿಯಲ್ಲಿ ಪ್ರತಿಯೊಬ್ಬರೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ಮುರಾರ್ಜಿ, ಏಕಲವ್ಯ ಮಾದರಿ ವಸತಿ ಕಾಲೇಜು ಹಾಗೂ ಲೊಕ್ಕನಹಳ್ಳಿ ಸರ್ಕಾರಿ ಪಪೂ ಕಾಲೇಜು ವತಿಯಿಂದ ಮಂಗಳವಾರ ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಒತ್ತಡ ನಿವಾರಣೆಯಾಗುವುದರ ಜತೆಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸಾಧನೆ ಮಾಡಬೇಕು. ಈ ದಿಸೆಯಲ್ಲಿ ಕ್ರೀಡೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾಲೇಜು ತೆರೆಯಲು ಸೂಚನೆ: ಕ್ರೀಡಾಂಗಣಕ್ಕೆ ಒಂದು ತಿಂಗಳೊಳಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದಾಗಿ ಶಾಸಕರು ಭರವಸೆ ನೀಡಿದರಲ್ಲದೆ, ಹೂಗ್ಯಂ ಹಾಗೂ ಮಾರ್ಟಳ್ಳಿ ಭಾಗದಲ್ಲಿ ಕಾಲೇಜು ತೆರೆಯಲು ಅಗತ್ಯ ಕ್ರಮವಹಿಸುವಂತೆ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಅವರಿಗೆ ಸೂಚಿಸಿದರು.

ಇದಕ್ಕೂ ಮುನ್ನ ಶಾಸಕರು ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಬಳಿಕ ಕ್ರೀಡಾಜ್ಯೋತಿ ಬೆಳಗಿಸಿದರು. ವಿದ್ಯಾರ್ಥಿಗಳು ಪಥಸಂಚನಲದ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಬಳಿಕ ವಿದ್ಯಾರ್ಥಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬಿಇಒ ಶಿವರಾಜು, ಮುರಾರ್ಜಿ ಶಾಲೆ ಪ್ರಾಂಶುಪಾಲ ಯೋಗೇಶ್, ಏಕಲವ್ಯ ಕಾಲೇಜು ಪ್ರಂಶುಪಾಲ ತಾರಾನಾಥ್, ಲೊಕ್ಕನಹಳ್ಳಿ ಕಾಲೇಜು ಜಯಪ್ರಕಾಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಣ ಸಂಯೋಜಕ ಕಂದವೇಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net