

ನುಗ್ಗೇಹಳ್ಳಿ: ಸಮೀಪದ ಭುವನಹಳ್ಳಿ ಗ್ರಾಮದ ವೆಂಕಣ್ಣನ ಕೆರೆ ಏರಿ ಮಾರ್ಗದಿಂದ ಒಂಟಿ ಮಾವಿನಹಳ್ಳಿ ಗೇಟ್‌ವರೆಗೆ ಡಾಂಬರು ರಸ್ತೆ ನಿರ್ಮಾಣ ಮಾಡುವುದರಿಂದ ತಗಡೂರು ಗ್ರಾಮ ಪಂಚಾಯಿತಿ ಹಾಗೂ ಬಾಗೂರು ಹೋಬಳಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ ಎಂದು ನಿವೃತ್ತ ಇಂಜಿನಿಯರ್ ಎಲ್.ಕೆ.ಶಿವಾನಂದ್ ಹೇಳಿದರು.
ಹೋಬಳಿಯ ಭುವನಹಳ್ಳಿ ವೆಂಕಣ್ಣನಕೆರೆ ವ್ಯಾಪ್ತಿಯಲ್ಲಿನ ಗಿಡಗಂಟಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕರು ಈ ರಸ್ತೆ ನಿರ್ಮಾಣಕ್ಕೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಮಾವಿನಹಳ್ಳಿ ಗ್ರಾಮದಿಂದ ಭುವನಹಳ್ಳಿಗೆ ಹೂವಿನಹಳ್ಳಿ ಎಚ್. ಎಂ.ಮಲ್ಲೇಗೌಡರು ಸುಮಾರು 45 ವರ್ಷಗಳ ಹಿಂದೆ ರಸ್ತೆ ಮಾಡಿಸಿದ್ದರು. ಈಗ ಇದು ಬಾಗೂರು ನುಗ್ಗೇಹಳ್ಳಿ ಹೋಬಳಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಜನಪ್ರತಿನಿಧಿಗಳು ಈ ರಸ್ತೆ ಮಾಡಿಸುವುದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ಅಲ್ಲದೆ ವೆಂಕಣ್ಣನ ಕೆರೆ ಕೋಡಿ ನೀರು ಹರಿಯಲು ಸೇತುವೆ ಆಗಬೇಕು ಎಂದು ತಿಳಿಸಿದರು.