

ಕುಕನೂರು: ಕಲಾವಿದರನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ 8ನೇ ವಾರ್ಡ್‌ನ ದುರ್ಗಾದೇವಿ ದೇವಸ್ಥಾನದಲ್ಲಿ ಕನಕ ಗ್ರಾಮೀಣಭಿವೃದ್ಧಿ ಹಾಗೂ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಂಗೀತದಿಂದ ಶಾಂತಿ-ನೆಮ್ಮದಿ ಸಿಗುತ್ತದೆ. ಎಲೆ ಮರೆ ಕಾಯಿಯಂತೆ ಇರುವ ಗ್ರಾಮೀಣ ಕಲಾವಿದರಿಗೆ ವೇದಿಕೆ ಕಲ್ಪಿಸುವ ಅವಶ್ಯಕತೆ ಇದೆ. ಸರ್ಕಾರ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಹಿರಿಯ ಸಾಹಿತಿ ವೀರಣ್ಣ ವಾಲಿ ಮಾತನಾಡಿ, ಕುಕನೂರು ಭಾಗದಲ್ಲಿ ದೊಡ್ಡ ದೊಡ್ಡ ವಿದ್ವಾಂಸರಿದ್ದಾರೆ. ದಿವಂಗತ ಪಂಡಿತ ಶಿವಕುಮಾರ ಕುಕನೂರು ಅವರ ಸಂಗೀತ ಸಾಧನೆ ಬಹಳ ದೊಡ್ಡದು. ಅವರ ಸಂಗೀತ ಪರಂಪರೆಯನ್ನು ಅವರ ಕುಟುಂಬದವರು ನಡೆಸಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದರು.
ಪ್ರಮುಖರಾದ ಬಸವರಾಜ ಕೊನಾರಿ, ಬಸವರಾಜ ಕೊಡ್ಲಿ, ಕಾಸಿಂಸಾಬ್ ಚೊಕಾಲಿ, ಶರಣಪ್ಪ ಬಿನ್ನಾಳ, ಬಸವರಾಜ ಭಜಂತ್ರಿ, ಪ್ರಕಾಶ ಕೊನ್ನಾಪುರ, ಪರಶುರಾಮ್ ಭಜಂತ್ರಿ, ಶಂಕ್ರಪ್ಪ ಬಡಿಗೇರ ಇತರರಿದ್ದರು. ಕಲಾವಿದ ಮುರಾರಿ ಎಸ್.ಭಜಂತ್ರಿ ಅವರು ಭಾವಗೀತೆ, ಭಕ್ತಿ ಗೀತೆ, ವಚನಗಳನ್ನು ಹಾಡಿ ಸಂಗೀತದ ರಸದೌತಣ ಉಣಬಡಿಸಿದರು.