

ಬಣಕಲ್: ಪಾಶ್ಚಿಮಾತ್ಯ ಲಿಪಿಗಳಲ್ಲಿ ಪ್ರಸಿದ್ದಿಯಾಗಿರುವ ಕ್ಯಾಲಿಗ್ರಫಿ ಕಲೆ ಕನ್ನಡದ್ಲಲೂ ಕೂಡ ಹೆಚ್ಚು ಪ್ರಚಲಿತಗೊಳ್ಳಬೇಕಿದೆ ಎಂದು ತೇಜಸ್ವಿ ಒಡನಾಡಿಗಳಾದ ರಾಘವೇಂದ್ರ ಹೇಳಿದರು.
ಎರಡು ದಿನ ನಡೆದ ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಲಿಕಾರ್ಥಿಗಳು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಆಕರ್ಷಕ ಹಾಗೂ ಸುಂದರವಾದ ಅಕ್ಷರ ವಿನ್ಯಾಸ ಕಲೆ ಬೆಳೆಸಬೇಕಿದೆ ಎಂದರು.
ಕಲಾವಿದ ಬಾಪು ದಿನೇಶ್ ಮಾತನಾಡಿ, ಕಂಪ್ಯೂಟರ್, ಮೊಬೈಲ್ ಕಾರಣದಿಂದ ಕೈ ಬರಹವೇ ಹಿನ್ನಲೆಗೆ ಸರಿದಿರುವ ಕಾಲಘಟ್ಟದಲ್ಲಿದ್ದೇವೆ. ವ್ಯಕ್ತಿತ್ವದ ಕೈಗನ್ನಡಿಯಂತಿರುವ ಕೈ ಬರಹವನ್ನು ಸುಂದರವಾಗಿಸುವ ಕ್ಯಾಲಿಗ್ರಫಿ ಕಲೆ ಕೈ ಬರಹದ ಕಡೆಗೆ ಬೆರಗು ಮೂಡಿಸಿ ಕೈ ಬರಹದ ಹವ್ಯಾಸ ಮುಂದುವರಿಸಿಕೊಳ್ಳುವಂತೆ ಮಾಡಿದೆ ಎಂದರು.
ಕ್ಯಾಲಿಗ್ರಫಿ ಕಲಾವಿದರಾದ ಟಿ.ಬಿ.ಕೋಡಿಹಳ್ಳಿ ಮಾತನಾಡಿ, ಎರಡು ದಿನ ನಡೆದ ಕಾರ್ಯಾಗಾರವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಕಾರ್ಯಾಗಾರದಲ್ಲಿ ಎಲ್ಲ ಕಲಿಕಾರ್ಥಿಗಳು ಸೀಮಿತ ಸಮಯದಲ್ಲೂ ಶ್ರದ್ಧೆಯಿಂದ ಕ್ಯಾಲಿಗ್ರಫಿಯನ್ನು ಕಲಿಯಲು ಪ್ರಯತ್ನಿಸಿದ್ದಾರೆ ಹಾಗೂ ಉತ್ತಮ ಕ್ಯಾಲಿಗ್ರಫಿಯನ್ನು ರಚಿಸಿದ 10 ಕಲಿಕಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ಮುಂದಿನ ದಿನಗಳಲ್ಲಿ ಕ್ಯಾಲಿಗ್ರಫಿ ಕುರಿತು ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಎರಡು ದಿನ ನಡೆದ ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಕಲಿಕಾರ್ಥಿಗಳು ಭಾಗವಹಿಸಿದ್ದರು. ಕ್ಯಾಲಿಗ್ರಫಿ ಕಲಾವಿದರಾದ ಜಿ. ಹರಿಕುಮಾರ್, ಮೋಹನ್ ಕುಮಾರ್ ಇ, ಅನಿಮಿಷ ನಾಗನೂರ್, ಹರ್ಷ ಕಾವಾ, ಟಿ.ಡಿ ಸುರೇಶ್, ತಾಂತ್ರಿಕ ಸಲಹೆಗಾರರಾದ ಪ್ರಜ್ವಲ್, ಟಿ.ಡಿ ಸುರೇಶ್, ಕೀಟ ತಜ್ಞರಾದ ಡಾ.ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ ಮುಂತಾದವರು ಇದ್ದರು.