ಜೋಳಿಗೆ ಅಭಿಯಾನಕ್ಕೆ ಕಲಾಸಕ್ತರು ಸಹಕಾರ ನೀಡಲಿ

28 ANK 1
Published on

ಅಂಕೋಲಾ: ಸಂಗಾತಿ ರಂಗಭೂಮಿ ಸಂಘಟಿಸಿದ ಜೋಳಿಗೆ ಅಭಿಯಾನದ ಜೋಳಿಗೆಯನ್ನು ತುಂಬಿಸುವ ಕಾರ್ಯಕ್ಕೆ ಕಲಾಸಕ್ತರು ಹಾಗೂ ನಾಗರಿಕರು ಸಹಕಾರ ನೀಡಬೇಕು ಎಂದು ಹೊನ್ನಾವರ ಸೇಫ್‌ಸ್ಟಾರ್ ಗ್ರುಪ್ ಅಧ್ಯಕ್ಷ ಹಾಗೂ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಜಿ.ಜಿ. ಶಂಕರ ಹೇಳಿದರು.

ಇಲ್ಲಿಯ ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಗಾತಿ ರಂಗಭೂಮಿಯವರು ಇತ್ತೀಚೆಗೆ ಆಯೋಜಿಸಿದ್ದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನಗೊಳ್ಳುವ ಜಾನಪದ ಕಲಾ ಪ್ರದರ್ಶನವನ್ನು ತಮಟೆ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಸಾಂಸ್ಕೃತಿಕ ಅಭ್ಯುದಯಕ್ಕೆ ಹಲವು ವರ್ಷಗಳಿಂದ ಈ ಸಂಸ್ಥೆ ಪ್ರಾಮಾಣಿಕ ಕಾರ್ಯ ಮಾಡುತ್ತಿದೆ. ಅವರ ಮುಂದಿನ ಯೋಜನೆಗಳಿಗೆ ನಾವು ಸಹಕಾರ ನೀಡುವುದು ಅಗತ್ಯವಿದೆ ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಮಾತನಾಡಿ, ಸಂಗಾತಿ ರಂಗಭೂಮಿ ಆರಂಭದಲ್ಲಿ ಅತೀ ಚಿಕ್ಕ ಸಂಘಟನೆಯ ಮೂಲಕ ಸಾಂಸ್ಕೃತಿಕ ಕಾರ್ಯ ಪ್ರಾರಂಭಿಸಿ, ಈಗ ತಂಡವು ಇಂದು ರಾಷ್ಟ್ರ ಮಟ್ಟದ ಕಾರ್ಯಕ್ರಮ ಸಂಘಟಿಸುವಲ್ಲಿ ಯಶಸ್ಸು ಕಂಡಿದೆ ಎಂದರು.

ಕೆಎಲ್‌ಇ ಕೆಎಲ್‌ಇ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿ.ಜಿ. ಶಂಕರ ಹಾಗೂ ದೃಶ್ಯ ಮಾಧ್ಯಮದ ಸಂಯೋಜಕ ಜಗದೀಶ ಭಾವೆ ಅವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಅಧ್ಯಕ್ಷ ಮಂಜುನಾಥ ಹರಿಕಂತ್ರ, ಕಲಾವಿದ ಸಂಜಯ ಎಂ. ನಾಯ್ಕ, ಕೆಎಲ್‌ಇ ಪಪೂ ಕಾಲೇಜಿನ ಪ್ರಚಾರ್ಯೆ ಡಾ.ಸ್ಮಿತಾ ಪಾತ್ರಪೇಕರ್, ಸಾಮಾಜಿಕ ಕಾರ್ಯಕರ್ತ ಬಿಂದೇಶ ನಾಯಕ ಹಿಚ್ಕಡ, ರೋಟರಿ ಕ್ಲಬ್ ಕಾರ್ಯದರ್ಶಿ ವಸಂತ ನಾಯ್ಕ, ಅಶೋಕ ಕಾಸರಕೋಡ ಉಪಸ್ಥಿತರಿದ್ದರು.

ಅಭಿಯಾನದ ಸಂಯೋಜಕ ಕೆ.ರಮೇಶ ಪ್ರಾಸ್ತಾವಿಕವಾಗಿ ಮಾನಾಡಿದರು. ತಿಮ್ಮಣ್ಣ ಭಟ್, ರವೀಂದ್ರ ಶೆಟ್ಟಿ ನಿರ್ವಹಿಸಿದರು. ಜಾನಪದ ಕಲಾವಿದರಾದ ಗುರುನಾಥ ಹುಬ್ಬಳ್ಳಿ, ಪರುಶು ರಾಮ, ರಾಜು, ನಾಗರಾಜ, ಗಂಗಮ್ಮ ಮುಂತಾದವರು ರೈತಗೀತೆ, ಜಾನಪದ ಗೀತೆಗಳನ್ನು ಹಾಡಿದರು. ಮಾರುತಿ ನಾಯ್ಕ, ಗದಗಯ್ಯ ಚಿಕ್ಕಮಠ, ನವೀನ ನಾಯ್ಕ, ಮಂಗಲಾ ಹರಿಕಂತ್ರ, ರೋಹಿತ ಕೇಣಿ, ಸ್ವಪ್ನಾ ಗಾಂವಕರ, ಮಾಲಾ ಬೆಳಸೆ, ದೇವಕಿ ಅವರ್ಸಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net