

ಶಿರಸಿ: ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನಾ ಸಭೆಯಲ್ಲಿ 190 ಅರ್ಜಿಗಳು ಸ್ವೀಕೃತವಾಗಿವೆ. ನಗರಸಭೆ ವ್ಯಾಪ್ತಿಯ ಸಮಸ್ಯೆಗಳೇ ಜಾಸ್ತಿ ಇದ್ದರೆ, ಗ್ರಾಮೀಣ ಪ್ರದೇಶದ ಜನರಿಂದ ರಸ್ತೆ, ವಿದ್ಯುತ್, ವಾಹನ ಸಂಪರ್ಕದ ಕುರಿತ ದೂರು ಅರ್ಜಿಗಳು ಸಲ್ಲಿಕೆಯಾಗಿವೆ.
ಸಾರ್ವಜನಿಕರ ಕುಂದು ಕೊರತೆ ಆಲಿಸಿ ಮಾತನಾಡಿದ ಶಾಸಕರು, ಸಾರ್ವಜನಿಕರಿಂದ ಬಂದ ದೂರುಗಳ ಅರ್ಜಿಯನ್ನು 15 ದಿನಗಳ ಒಳಗಾಗಿ ಅಧಿಕಾರಿಗಳು ವಿಲೇವಾರಿ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಸಾಲ್ಕಣಿ ಪಂಚಾಯಿತಿ ಮುರೇಗಾರ ಗ್ರಾಮಸ್ಥರು ಅರ್ಜಿ ಸಲ್ಲಿಸಿ, ಸಾಲ್ಕಣಿಯಿಂದ ಮುರೇಗಾರ ಫಾಲ್ಸ್‌ವರೆಗೆ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸರ್ವ ಋತು ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ, ರಸ್ತೆ ನಿರ್ಮಾಣಕ್ಕಾಗಿ 20 ಲಕ್ಷ ರೂ. ಮಂಜೂರಾಗಿದೆ. ಕಾಮಗಾರಿ ಆರಂಭಿಸಲು ಈಗಾಗಲೇ ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ ಎಂದರು. 15 ದಿನದಲ್ಲಿ ಕೆಲಸ ಆರಂಭಿಸದಿದ್ದರೆ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು ಎಂದು ಶಾಸಕರು ಎಚ್ಚರಿಸಿದರು.
ಗುಬ್ಬಿಗದ್ದೆಯಲ್ಲಿ ಬಸ್ ತಂಗುದಾಣ ನಿರ್ಮಿಸಲು ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗುವುದು. 15 ದಿನದಲ್ಲಿ ಕೆಲಸ ಆರಂಭ ಆಗಲಿದೆ. ಶಿರಸಿ ತಾಲೂಕಿಗೆ 60 ಫುಟ್ ಬ್ರಿಜ್ ಮಂಜೂರಾಗಿವೆ. ತಾಲೂಕಿನಲ್ಲಿ ಇನ್ನೂ ಹಲವೆಡೆ ಕಾಲು ಸಂಕದ ಅಗತ್ಯತೆ ಇದ್ದು, ಶೀಘ್ರದಲ್ಲಿಯೇ ಇನ್ನೊಂದು ಪಟ್ಟಿ ಸಿದ್ಧಪಡಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಹುತ್ಗಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಹಿಂದೆ ಮಣ್ಣು ಕುಸಿಯುತ್ತಿರುವ ಬಗ್ಗೆ, ಬಂಡಲ ಪಂಚಾಯಿತಿ ವ್ಯಾಪ್ತಿಯ ಬಾಗಿಮನೆ, ಗಿಳಗುಂಡಿ ಭಾಗದ ಜನತೆಯಿಂದ ಸರ್ವಋತು ರಸ್ತೆ ನಿರ್ಮಾಣದ ಬಗ್ಗೆ ಅಹವಾಲು ಮಂಡಿಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ತಹಸೀಲ್ದಾರ್ ರಮೇಶ ಹೆಗಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ಬಿ.ಪಿ. ಸತೀಶ, ಡಿವೈಎಸ್ಪಿ ಗಣೇಶ ಕೆ. ಎಲ್. ಇತರರಿದ್ದರು. ಇದೇ ವೇಳೆ ವಿವಿಧ ಇಲಾಖೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ನಗರದಲ್ಲಿ ಫಾರಂ ನಂ.3 ನೀಡುವಿಕೆಯಲ್ಲಿ ಇನ್ನೂ ಸಮಸ್ಯೆ ಇರುವ ಕುರಿತಂತೆ ಕೆಲವರು ಸಭೆಯ ಗಮನಕ್ಕೆ ತಂದರು.
ಈ ಕುರಿತು ಉತ್ತರಿಸಿದ ಭೀಮಣ್ಣ ನಾಯ್ಕ, ಈಗಾಗಲೇ ಫಾರಂ ನಂ.3 ಸಮಸ್ಯೆ ಬಗೆಹರಿಸಲು ಯತ್ನ ನಡೆದಿದೆ. ಈ ಕುರಿತಂತೆ ಸದನ ಉಪ ಸಮಿತಿ ಶೀಘ್ರವೇ ವರದಿ ಸಲ್ಲಿಸಲಿದೆ. ಜತೆಗೆ ನಗರದ 31 ವಾರ್ಡ್‌ನ್ನೂ ಸಿಟಿ ಸರ್ವೇ ಅಡಿ ಸೇರಿಸುವ ಯತ್ನವೂ ನಡೆಯುತ್ತಿದೆ. ಯಾರೂ ಲೇ ಔಟ್ ಮಾಡಿಸಿಕೊಳ್ಳದೇ ಮನೆ ನಿರ್ಮಿಸಿಕೊಳ್ಳಬೇಡಿ ಎಂದರು.
ನಗರದ ಬನವಾಸಿ ರಸ್ತೆಯಲ್ಲಿ ಇಕ್ಕಟ್ಟಾದ ರಸ್ತೆಯಿಂದ ವಾಹನ ಸಂಚಾರಕ್ಕೆ ತೊಂದರೆ, ಅಸಮರ್ಪಕ ವಾಹನ ಪಾರ್ಕಿಂಗ್ ಬಗ್ಗೆ ಚರ್ಚೆ ನಡೆಯಿತು. ನಗರಸಭೆ ಮತ್ತು ಪೊಲೀಸ್ ಇಲಾಖೆ 31 ವಾರ್ಡ್‌ಗಳ ನಕ್ಷೆಯನ್ನು ಇಟ್ಟುಕೊಂಡು ಏಕಮುಖ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನೂ ಹೊಸದಾಗಿ ನಕ್ಷೆ ಮಾಡಬೇಕು ಎಂದು ಭೀಮಣ್ಣ ಸೂಚಿಸಿದರು.