ಕೃಷಿ ಪರಿಕರಗಳು ಒಂದೇ ಸೂರಿನಡಿ ದೊರೆಯುವಂತಾಗಲಿ

11arsph1ep
ಅರಸೀಕೆರೆಯಲ್ಲಿ ಸಮರ್ಥ್ ರೈತ ಮಿತ್ರ ಆಗ್ರೋ ಏಜೆನ್ಸಿ ವತಿಯಿಂದ ದಾಳಿಂಬೆ ಕೃಷಿಯಲ್ಲಿ ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಪ್ರಗತಿಪರ ಬೆಳೆಗಾರರನ್ನು ಸನ್ಮಾನಿಸಲಾಯಿತು. ವಿ.ಗೋವಿಂದೇಗೌಡ, ಅಕ್ಷಯ್ ಚಂದನ್, ಎ.ಪಿ.ಶಿವಕುಮಾರ್, ಸೋಮಶೇಖರ್, ಸ್ವಾಮಿ, ಪರಮಶಿವು, ಇತರರಿದ್ದರು.
Published on

ಅರಸೀಕೆರೆ : ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಅನ್ನದಾತರಿಗೆ ಒಂದೇ ಸೂರಿನಡಿ ಅಗತ್ಯ ಕೃಷಿ ಪರಿಕರಗಳು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಪಟೂರಿನ ಕೆ.ವಿ.ಕೆ. ಸಂಸ್ಥೆಯ ಹಿರಿಯ ಭೂವಿಜ್ಞಾನಿ ವಿ.ಗೋವಿಂದೇಗೌಡ ಹೇಳಿದರು.

ಸಮರ್ಥ್ ರೈತ ಮಿತ್ರ ಆಗ್ರೋ ಏಜೆನ್ಸಿ ವತಿಯಿಂದ ನಗರದ ತಾಲೂಕು ಕಚೇರಿ ಬಳಿ ಸೋಮವಾರ ಹಮ್ಮಿಕೊಂಡಿದ್ದ ದಾಳಿಂಬೆ ಬೆಳೆಗಾರರ ಜತೆಗಿನ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬೇಸಾಯದಲ್ಲಿ ತೊಡಗಿಸಿಕೊಂಡರೆ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ದಾಳಿಂಬೆ, ತೆಂಗು, ಅಡಕೆ, ಡ್ರ್ಯಾಗನ್ ಫ್ರೂಟ್ ಒಳಗೊಂಡಂತೆ ಎಲ್ಲ ಬಗೆಯ ಸುಧಾರಿತ ತಳಿಗಳನ್ನು ಒಂದೇ ಸೂರಿನಡಿ ನೀಡುವ ವ್ಯವಸ್ಥೆ ರೂಪಿಸಬೇಕಿದೆ. ಟ್ರ್ಯಾಕ್ಟರ್, ಟ್ರಿಲ್ಲರ್, ಬಿತ್ತನೆ ಬೀಜ, ಪೋಷಕಾಂಶಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿದಲ್ಲಿ ರೈತರ ಅನಗತ್ಯ ಸುತ್ತಾಟ ತಪ್ಪಿದಂತಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಬಿಎಸ್ಸಿ ಅಥವಾ ಎಂಎಸ್ಸಿ ಕೃಷಿ ಓದಿದ ಕೂಡಲೇ ಸರ್ಕಾರಿ ಕೆಲಸ ಸಿಗಬೇಕು ಎನ್ನುವ ಧೋರಣೆಯಿಂದ ಯುವಕ, ಯುವತಿಯರು ಹೊರಬರಬೇಕು. ಬೇಸಾಯ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಜತೆಗೆ ನಾಲ್ಕಾರು ಜನರಿಗೆ ದುಡಿಯಲು ಅವಕಾಶ ನೀಡುವ ಆಯ್ಕೆ ನಿಮಗಿದೆ. ಈ ನಿಟ್ಟಿನಲ್ಲಿ ಸಮರ್ಥ್ ರೈತ ಮಿತ್ರ ಆಗ್ರೋ ಏಜೆನ್ಸಿ ಸ್ಥಾಪಕ ಅಕ್ಷಯ್ ಚಂದನ್ ಮಾದರಿಯಾಗಿದ್ದಾರೆ ಎಂದರು.

ಸಮರ್ಥ್ ರೈತ ಮಿತ್ರ ಆಗ್ರೋ ಏಜೆನ್ಸಿ ಸ್ಥಾಪಕ ಹಾಗೂ ದಾಳಿಂಬೆ ಸಲಹೆಗಾರ ಅಕ್ಷಯ್ ಚಂದನ್ ಮಾತನಾಡಿ, ಎಂಎಸ್ಸಿ ಪದವಿ ಪಡೆದ ಬಳಿಕ ಕೈತುಂಬ ಸಂಬಳ ಪಡೆಯುವ ಉದ್ಯೋಗ ಲಭಿಸಿತ್ತು. ನನ್ನೂರಿನಲ್ಲಿ ಕೃಷಿಕರಿಗೆ ನೆರವಾಗಬೇಕು ಎನ್ನುವ ಸಂಕಲ್ಪದೊಂದಿಗೆ ಹೆಜ್ಜೆಯಿಟ್ಟಿದ್ದೇನೆ. 2020ರಲ್ಲಿ ಕೇವಲ 50 ದಾಳಿಂಬೆ ಬೆಳೆಗಾರರು ಸಂಪರ್ಕಕ್ಕೆ ಬಂದಿದ್ದರು. ಈಗ ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳ 270 ಬೆಳೆಗಾರರು ಸಂಸ್ಥೆಯ ನೆರವು ಕೋರಿರುವುದು ಸಂತಸ ತಂದಿದೆ. ಆಸಕ್ತ ರೈತರು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದು ದಾಳಿಂಬೆ ಬೆಳೆ ಬೆಳೆದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಬಹುದಾಗಿದೆ ಎಂದು ವಿವರಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಸತೀಶ್, ಚಿಕ್ಕನಾಯಕನಹಳ್ಳಿ ತಾಲೂಕಿನ ಕೃಷಿ ತಾಂತ್ರಿಕ ಅಧಿಕಾರಿ ಬೋರೆಹಳ್ಳಿ ಸೋಮಶೇಖರ್ ಇದ್ದರು.

ದಾಳಿಂಬೆ ಕೃಷಿಯಲ್ಲಿ ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಪ್ರಗತಿಪರ ಬೆಳೆಗಾರರನ್ನು ಸನ್ಮಾನಿಸಲಾಯಿತು. ಚಲುವನಹಳ್ಳಿ ಸ್ವಾಮಿ, ಪರಮಶಿವು, ಕುರುಬರಹಳ್ಳಿ ಗುರುಮುರ್ತಿ ಹಾಗೂ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net