ಕಾರ್ಯಕರ್ತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿ

BYD BJP BHAVACHITRA
Published on

ಬ್ಯಾಡಗಿ: ಕೇಂದ್ರ ಸರ್ಕಾರದ ಯೋಜನೆ ಹಾಗೂ ಪಕ್ಷದ ಸಿದ್ಧಾಂತಗಳನ್ನು ಸಂಘಟನೆ ಮೂಲಕ ಜನರಿಗೆ ತಿಳಿಸುವಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಬೂತ್ ಮಟ್ಟದಿಂದ ಪಕ್ಷ ಕಟ್ಟಲು ಮುಂದಾಗಬೇಕು ಎಂದು ಬಿಜೆಪಿ ಬೂತ್ ಮಟ್ಟದ ಅಭಿಯಾನ ಸಂಚಾಲಕ ಎಂ.ಎಸ್. ಪಾಟೀಲ ತಿಳಿಸಿದರು.

ಪಟ್ಟಣದ ಹಳೇ ಪುರಸಭೆ ಎದುರು ಕಾರ್ಯಕರ್ತರ ಹೋರಾಟದ ವೇಳೆ ಬಿಜೆಪಿ ಸಂಸ್ಥಾಪಕ ಪಂ. ದೀನದಯಾಳ ಉಪಾಧ್ಯಾಯ, ಶ್ಯಾಮಾಪ್ರಸಾದ್ ಮುಖರ್ಜಿ ಹಾಗೂ ಭಾರತಾಂಬೆ ಸೇರಿದಂತೆ ವಿವಿಧ ಮಹಾತ್ಮರ ಭಾವಚಿತ್ರಗಳನ್ನು ಬೂತ್ ಮಟ್ಟದ ಕೇಂದ್ರಗಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ 242 ಬೂತ್ ಮಟ್ಟದ ಎಲ್ಲ ಕೇಂದ್ರಗಳಿಗೂ ಭೇಟಿ ನೀಡಿ, ಸಭೆ ಏರ್ಪಡಿಸಿ ಪಕ್ಷದ ಜಾಗೃತಿಯೊಂದಿಗೆ ಭಾವಚಿತ್ರಗಳನ್ನು ವಿತರಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಯುವಪೀಳಿಗೆಯನ್ನು ಒಟ್ಟೊಟ್ಟಿಗೆ ಕರೆದುಕೊಂಡು ಪಕ್ಷದ ಸಿದ್ದಾಂತ ಹಾಗೂ ಯೋಜನೆಗಳನ್ನು ತಿಳಿಸಿ ಪಕ್ಷದ ಅಭಿಮಾನ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷ ಕಟ್ಟಲು ತಳಹಂತದಿಂದಲೇ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಜಿ ಜನ್ಮದಿನದ ನಿಮಿತ್ತ ಸ್ವಚ್ಛತೆ, ರಕ್ತದಾನ ಶಿಬಿರ ಸೇರಿದಂತೆ ಹಲವು ಜನಪರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಆಯಾ ಕೇಂದ್ರ ವ್ಯಾಪ್ತಿಯ ಶಾಲಾ ಕಾಲೇಜ್, ಆಸ್ಪತ್ರೆ, ಬಸ್ ನಿಲ್ದಾಣ, ಎಪಿಎಂಸಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಅಥವಾ ಸಾರ್ವಜನಿಕರ ಜಾಗಗಳಲ್ಲಿ ಒಂದೊಂದು ಸಸಿ ನೆಡುವ ಮೂಲಕ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಕರು ಹಾಗೂ ಸ್ಥಳೀಯ ಕಾರ್ಯಕರ್ತರು ಎಲ್ಲೆಡೆ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಉಪಾಧ್ಯಕ್ಷ ಬಸವರಾಜ ಛತ್ರದ, ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟೆ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಚೇರ್ಮನ್ ಚಂದ್ರಪ್ಪ ಶೆಟ್ಟರ, ಸದಸ್ಯ ವಿನಯಕುಮಾರ ಹಿರೇಮಠ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ರಾಮಣ್ಣ ಕೋಡಿಹಳ್ಳಿ, ರಾಜು ಹೊಸಕೇರಿ, ಮುರಿಗೆಪ್ಪ ಶೆಟ್ಟರ, ಚಂದ್ರಣ್ಣ ಆಲದಗೇರಿ, ವಿದ್ಯಾ ಶೆಟ್ಟಿ, ಶಂಕ್ರಗೌಡ್ರ ಪಾಟೀಲ, ಶಿವಯೋಗಿ ಗಡಾದ, ಕೆಂಪೇಗೌಡ್ರ ಪಾಟೀಲ, ವೀರೇಂದ್ರ ಶೆಟ್ಟರ, ನಾಗರಾಜ ಹಾವನೂರು, ವಿಜಯಭರತ ಬಳ್ಳಾರಿ, ಸುರೇಶ ಉದ್ಯೋಗಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net