

ಮೈಸೂರು: ಕನ್ನಡ ಸಾಹಿತ್ಯ ವಿದ್ವಾಂಸರ ಕಾರ್ಯ ಸಾಧನೆಗಳನ್ನು ದಾಖಲೀಕರಣ ಮಾಡುವ ಕೆಲಸ ಆಗಬೇಕು ಎಂದು ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹೊಯ್ಸಳ ಕನ್ನಡ ಸಂಘದ ಸಹಯೋಗದಲ್ಲಿ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಎಸ್.ಸುಧಾ ಅವರ ನೆನಪಿನ ಹೆಜ್ಜೆಗಳು ಹಾಗೂ ಕೆ.ರಮೇಶ್ ಅವರ ಕಾಣದ ಗ್ರಾಮಕ್ಕೆ ಕೈಮರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಸಾಧಕರ ಸಾಧನೆಯನ್ನು ಯುವ ಪೀಳಿಗೆ ತಲುಪಿಸಬೇಕು. ಆದರೆ ದಾಖಲೀಕರಣ ಆಗಿಲ್ಲ ಎಂದರು.
ಹಿರಿಯ ಸಾಹಿತ್ಯ ವಿದ್ವಾಂಸರ ಬಗ್ಗೆ ಅರಿಯುವ, ಅವರ ಸಾಧನೆ ದಾಖಲಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಡಾ.ಎಸ್.ಸುಧಾ ಮತ್ತು ಕೆ. ರಮೇಶ್ ಸಾಗುತ್ತಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಕೃತಿಗಳು ಪ್ರಕಟವಾಗಬೇಕು ಎಂದರು.
ಕನ್ನಡ ಸಾಹಿತ್ಯ ಮತ್ತು ಶಾಸ್ತ್ರೀಯ ವಿಷಯಗಳ ಬಗ್ಗೆ ನಾಡಿನ ಸಾಕಷ್ಟು ಹಿರಿಯ ವಿದ್ವಾಂಸರು ಅತ್ಯುತ್ತಮ ಕೊಡುಗೆ ಕೊಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳು ಇದನ್ನು ಸ್ಮರಿಸುವ, ಅಧ್ಯಯನ ಕಾರ್ಯ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಮೈಸೂರು ರಂಗನಾಥ್, ಲೇಖಕ ಕೆರೋಡಿ ಲೋಲಾಕ್ಷಿ, ಕೃತಿಯ ಲೇಖಕರಾದ ಡಾ.ಎಸ್. ಸುಧಾ, ಕೆ.ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು.