ಮಲೆನಾಡಿನ 36 ಶಾಸಕರು ಒಗ್ಗಟ್ಟಾಗಿ ಹೋರಾಡಲಿ

ಮಲೆನಾಡಿನ 36 ಶಾಸಕರು ಒಗ್ಗಟ್ಟಾಗಿ ಹೋರಾಡಲಿ
Published on

ಸೋಮವಾರಪೇಟೆ: ರಾಜ್ಯದ ಮಲೆನಾಡಿನ ಎಲ್ಲ 36 ಶಾಸಕರು ಒಗ್ಗಟ್ಟಾಗಿ ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಪಡೆಯಲು ಹಾಗು ಕಸ್ತೂರಿ ರಂಗನ್ ಅನುಷ್ಠಾನದ ವಿರುದ್ಧ ಹೋರಾಡಿದರೆ ಮಾತ್ರ ರೈತರಿಗೆ ನ್ಯಾಯ ಸಿಗಬಹುದು ಎಂದು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್ ಕುಮಾರ್ ಅಭಿಪ್ರಾಯಿಸಿದರು.

ಸಿ ಆಂ್ಯಡ್ ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಕೃಷಿ ಭೂಮಿ ಹಾಗೂ ಕಸ್ತೂರಿ ರಂಗನ್ ವರದಿ ವಿರುದ್ಧ ಯಾವುದೇ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಲಿಲ್ಲ. ರೈತರಿಗೆ ಸಲ್ಲದ ವಿಚಾರಗಳನ್ನು ತಿಳಿಸಿ ಹೆದರಿಸಿ, ರೈತರು ಆತಂಕಗೊಳ್ಳುವಂತೆ ಮಾಡುತ್ತಿದ್ದಾರೆ. ಇನ್ನಾದರೂ ರೈತರನ್ನು ದಾರಿತಪ್ಪಿಸುವ ಕೆಲಸ ಬಿಡಬೇಕು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜಕೀಯ ರಹಿತ ಹೋರಾಟ ಮಾಡಿದರೆ ಮಾತ್ರ, ರೈತರಿಗೆ ಉಪಯೋಗವಾಗಲಿದೆ. ಹಾಲಿ, ಮಾಜಿ ಶಾಸಕರು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಬೇಕು. ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ಹೋರಾಟಕ್ಕೆ ಹೋದರೆ, ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದರು.

ತಾಲೂಕು ಅಭಿವೃದ್ಧಿಗೆ ಸಮಿತಿ ಹೋರಾಟದಿಂದ ತಾಲೂಕಿನ ಅಬ್ಬೂರುಕಟ್ಟೆ, ಅರೆಯೂರು, ಹೊಸಳ್ಳಿ, ಸೀಗೆಹೊಸೂರು, ಮದ್ಲಾಪುರ, ಕೂಡಿಗೆ ಮಾರ್ಗದಲ್ಲಿ ಗ್ರಾಮೀಣ ಸಾರಿಗೆ ಬಸ್ ಬುಧವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.

ಸಮಿತಿಯ ನಿರ್ದೇಶಕ ಜಿ.ಎಂ. ಹೂವಯ್ಯ ಮಾತನಾಡಿ, ಸಿ ಆ್ಯಂಡ್ ಡಿ ಭೂಮಿಯ ಎಲ್ಲಿದೆ ಎಂಬುದರ ಬಗ್ಗೆ ಅರಣ್ಯ ಇಲಾಖೆಗೆ ಗೊತ್ತಿಲ್ಲ. ಸರ್ಕಾರಕ್ಕೂ ಸರಿಯಾದ ಮಾಹಿತಿ ಇಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿಸಿ, ಸಿ ಆ್ಯಂಡ್ ಡಿ ಗುರುತಿಸಬೇಕು. ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಕೊಟ್ಟರೆ ಸಾಕು. ನೂರಾರು ವರ್ಷಗಳಿಂದ ಈ ಭಾಗದಲ್ಲಿ ರೈತರು ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದು, ಅವರ ಕೃಷಿ ಭೂಮಿಯನ್ನು ಕಿತ್ತುಕೊಂಡರೆ ನೂರಾರು ರೈತ ಕುಟುಂಬಗಳು ಬೀದಿಗೆ ಬರುತ್ತವೆ. ರೈತರು ಒತ್ತುವರಿ ಮಾಡಿಕೊಂಡಿರುವ ಭೂಮಿಯ ಪೋಡಿ ಮಾಡಿಸಿ, ದಾಖಲಾತಿ ಪರಿಶೀಲಿಸಿದಲ್ಲಿ ಅಧಿಕಾರಿಗಳಿಗೆ ಪೂರ್ಣ ಮಾಹಿತಿ ದೊರಕುವುದು ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ನಿರ್ದೇಶಕ ಪಿ.ಕೆ.ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net