

ಮೈಸೂರು: ತಾಂತ್ರಿಕತೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು. ದೇಶದ 145 ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿಯು 11ನೇ ಸ್ಥಾನದಲ್ಲಿದ್ದು, 10ರೊಳಗೆ ಸ್ಥಾನ ಪಡೆಯುವಂತಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್ ಶಿವರಾಮು ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ಶಿಕ್ಷಣ ಘಟಕವು ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಹಾಗೂ ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಕೃಷಿ ವಿವಿಯು ತನ್ನ ವಲಯ ಹಾಗೂ ಪ್ರಾದೇಶಿಕ ಕೇಂದ್ರಗಳ ಮೂಲಕ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುತ್ತಿದೆ. ನಾಗನಹಳ್ಳಿ ಕೇಂದ್ರವಂತೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸತ್ತಿದೆ ಎಂದು ಶ್ಲಾಘಿಸಿದರು.
ಕೃಷಿ ತಾಂತ್ರಿಕತೆಗಳ ಲಾಭ ಪಡೆದು ರೈತರು ಆರ್ಥಿಕವಾಗಿ ಮುಂದೆ ಬರಬೇಕು. ತಾಂತ್ರಿಕತೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು. ದೇಶದ 145 ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿಯು 11ನೇ ಸ್ಥಾನದಲ್ಲಿದೆ. ಇದು 10 ರೊಳಗೆ ಇರಬೇಕು ಎಂಬುದು ಕುಲಪತಿ ಡಾ.ಎಸ್.ವಿ. ಸುರೇಶ ಅವರ ಆಶಯವಾಗಿದೆ. ಆ ನಿಟ್ಟಿನಲ್ಲಿ ವಿವಿಯು ಕೆಲಸ ಮಾಡುತ್ತಿದೆ ಎಂದರು.
ನ.14 ರಿಂದ 17 ರವರೆಗೆ ಬೆಂಗಳೂರು ಕೃಷಿ ವಿವಿಯಲ್ಲಿ ಕೃಷಿ ಮೇಳ ನಡೆಯುತ್ತದೆ. ಅದೇ ರೀತಿ ನ.26-27 ರಂದು ಮಂಡ್ಯದ ವಿ.ಸಿ. ಫಾರಂನಲ್ಲಿ ಕೃಷಿ ಮೇಳ ನಡೆಯಲಿದ್ದು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ರೈತರು ಹೆಚ್ಚಾಗಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ರೈತರ ಮಕ್ಕಳು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಹಾಗೂ ಮೀನುಗಾರಿಕೆ ಪದವಿ ಓದಬೇಕು. ಈ ಎಲ್ಲವೂ ಸರ್ಕಾರಿ ವಲಯದಲ್ಲಿಯೇ ಇರುವುದರಿಂದ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮುಗಿಯುತ್ತದೆ. ನಂತರ ಉದ್ಯೋಗ ಅವಕಾಶಗಳು ಕೂಡ ದೊರೆಯುತ್ತವೆ.
ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರಾದ ಮುಖ್ಯಸ್ಥ ಡಾ.ಸಿ. ರಾಮಚಂದ್ರ ಮಾತನಾಡಿ, ಆರೋಗ್ಯಕರ ಮಣ್ಣು, ಆರೋಗ್ಯಕರ ಆಹಾರ ಹಾಗೂ ಆರೋಗ್ಯಕರ ಜನ’ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಿದೆ. ಆ ಕೇಂದ್ರದಲ್ಲಿ 2005 ರಿಂದ ಸಾವಯವ ಕೃಷಿಯ ಮೂಲಕವೇ ಎಲ್ಲ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮಾಡಲಾಗುತ್ತದೆ. ಇದನ್ನು ಕ್ಷೇತ್ರೋತ್ಸವದ ಮೂಲಕ ರೈತರಿಗೆ ತಿಳಿಸಲಾಗುತ್ತಿದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ರಾಜು ಮಾತನಾಡಿ, ದೇಶದಲ್ಲಿ ಹಸಿರುಕ್ರಾಂತಿಯ ನಂತರ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಆಹಾರ ಭದ್ರತೆ ಇದೆ. ಆದರೆ ಪೌಷ್ಟಿಕ ಆಹಾರ ಉತ್ಪಾದನೆ ಮತ್ತು ಸೇವನೆ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಮಂಡ್ಯ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್. ಶಿವಕುಮಾರ್ ಮಾತನಾಡಿ, ಪೋಷಕಾಂಶ ಇರುವ ಸೇವಿಸಬೇಕು.ಊಟದಲ್ಲಿ ತರಕಾರಿ, ಸೊಪ್ಪು, ಕಾಳುಗಳು ಇರಬೇಕು. ಹಾಲು,ಮೊಟ್ಟೆ, ಮಾಂಸ ಕೂಡ ಬಳಸಬೇಕು ಎಂದರು.
ಸುತ್ತೂರು ಜೆಎಎಸ್‌ಎಸ್ ಕೆವಿಕೆ ಮುಖ್ಯಸ್ಥ ಡಾ.ಜ್ಞಾನೇಶ್, ಸುತ್ತೂರು ಕೆವಿಕೆ ವಿಜ್ಞಾನಿ ಡಾ.ದೀಪಕ್ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಮಮತಾ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಒಡಿಪಿ ಸಂಸ್ಥೆಯ ಜಾನ್, ಇಲಾಖೆಯ ಡಾ. ಶೇಖರ್, ಡಾ. ಸುರೇಶ್, ಚನ್ನಬಸಪ್ಪ, ದಿನೇಶ್, ಸಸ್ಯ ರೋಗಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಎನ್. ಉಮಾಶಂಕರ್ ಕುಮಾರ್ ಇತರರು ಇದ್ದರು. ರೈತರಿಂದ ರೈತರಿಗೆ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ನಂಜನಗೂಡು ತಾ. ಮುದ್ದಹಳ್ಳಿಯ ಚಿಕ್ಕಸ್ವಾಮಿ, ಹುಣಸೂರು ತಾಲೂಕು ಧರ್ಮಾಪುರದ ಬಿ. ಅಖಿಲ್ ತಮ್ಮ ಅನಿಸಿಕೆ ಹಂಚಿಕೊಂಡರು. ಇತರರು ವಿವಿಧ ವಿಷಯ ಕುರಿತು ವಿಷಯ ಮಂಡಿಸಿದರು.