

ಮುಧೋಳ: ಇಂದಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಹೊಸಗನ್ನಡ ಸಾಹಿತ್ಯಕ್ಕೆ ಜೋತುಬಿದ್ದು ಹಳೆಗನ್ನಡ ಸಾಹಿತ್ಯ ದೂರ ಮಾಡಿರುವುದು ವಿಷಾದನೀಯ ಎಂದು ಸಂಶೋಧಕ, ಮೋಡಿಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಹೇಳಿದರು.
ನಗರದ ಬಾಗಲಕೋಟೆ ಬವಿವಿ ಸಂಘದ ಎಸ್.ಆರ್. ಕಂಠಿ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ವತಿಯಿಂದ ಗುರುವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಹಳಗನ್ನಡ ಸಾಹಿತ್ಯಾವಲೋಕನ ಐದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಳಗನ್ನಡ ಕಾವ್ಯಗಳು ತಂತ್ರಜ್ಞಾನದ ಭಾಗವಾಗಬೇಕು, ವಿದ್ಯಾರ್ಥಿಗಳು ದಿನನಿತ್ಯ ಹಳಗನ್ನಡ ಭಾಷೆ ಸರಾಗವಾಗಿ ಓದುವ, ರಸಗ್ರಹಣ ಮಾಡಿಕೊಳ್ಳುವ ಸ್ವರೂಪ ಕಂಡುಕೊಳ್ಳಬೇಕು. ಇತ್ತೀಚೆಗೆ ಕೆಲವು ವಿಶ್ಯವಿದ್ಯಾಲಯಗಳು ರೂಪಿಸುವ ಪಠ್ಯಕ್ರಮದಲ್ಲಿ ಹಳಗನ್ನಡ ಸಾಹಿತ್ಯ ಸೇರಿಸದೆ ಇರುವುದು ದುರದೃಷ್ಟಕರ ಎಂದರು.
ಆಧುನಿಕ ಜಗತ್ತು ಅನುಭವಿಸುವ ವ್ಯಾಕುಲತೆಗೆ ಹಳಗನ್ನಡ ಸಾಹಿತ್ಯವನ್ನು ಮಲಾಮು ರೀತಿ ಬಳಸಬಹುದಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಎಂದು, ರನ್ನನ ಗದಾಯುದ್ಧದ ವೈಶಂಪಾಯನ ಸರೋವರದ ಪ್ರಸಂಗ ವಿವರಿಸಿದರು.
ಕನ್ನಡ ಪ್ರಾಧ್ಯಾಪಕಿ ಡಾ. ರೇಖಾಮನಿ ಸಿ.ಎಂ. ಮಾತನಾಡಿ, ಭರತ ಬಾಹುಬಲಿ ಯುದ್ಧದ ಪ್ರಸಂಗವನ್ನು ಊದಾಹರಣೆ ಸಮೇತ ವಿವರಿಸಿದರು.
ಪ್ರಾಚಾರ್ಯ ಪ್ರೊ. ಎಂ.ವಿ. ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳಗನ್ನಡ ಸಾಹಿತ್ಯದ ಶ್ರೀಮಂತಿಕೆಯಿಂದಾಗಿ ಕರ್ನಾಟಕ ಇಂದು ಅಂತಾರಾಷ್ಟ್ರೀಯಮಟ್ಟದ ಕೀರ್ತಿ ಹೊಂದಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಹ್ಲಾದ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಪ್ರೊ. ಎ.ಆರ್. ಕಡೂರ, ಕನ್ನಡ ಉಪನ್ಯಾಸಕಿ ಪ್ರೊ. ಎಲ್.ಎಂ. ಕಲ್ಯಾಣಶೆಟ್ಟಿ ಇದ್ದರು.
ಕನ್ನಡ ಸಂಘದ ಸಂಚಾಲಕ ಪ್ರೊ. ವೀರಣ್ಣ ಕಿತ್ತೂರ ಸ್ವಾಗತಿಸಿದರು. ವಿದ್ಯಾರ್ಥಿನಿಯ ರಾಧಾ ಶಾಂತಾ ಗಾಣಿಗೇರ, ಸವಿತಾ ಲಕ್ಕಪ್ಪಗೋಳ ಪ್ರಾರ್ಥಿಸಿದರು. ಉಷಾ ಬೆಳಗಲಿ ನಿರೂಪಿಸಿ, ಐಶ್ವರ್ಯ ಬಂಡಿವಡ್ಡರ ವಂದಿಸಿದರು.