ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸಲಿ

17M.D.R.2
ಮದ್ದೂರು ಪಟ್ಟಣದ ಗುರು ಭವನದಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಸಿ.ಎಚ್.ಕಾಳೀರಯ್ಯ, ಕೆ.ಎಸ್.ದೇವರಾಜು, ಹನುಮಶೆಟ್ಟಿ, ಲೋಕೇಶ್, ರವಿಕುಮಾರ್ ಇದ್ದರು.
Published on

ಮದ್ದೂರು: ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸುವ ಸಂಕಲ್ಪ ಮಾಡಬೇಕು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಶಿಕ್ಷಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮೊದಲು ಶಿಸ್ತಿನ ಸಿಪಾಯಿಗಳಾಗಬೇಕು. ಆ ಮೂಲಕ ಮಕ್ಕಳಿಗೆ ಶಿಸ್ತು ಕಲಿಸಿದರೆ ಅದೇ ದೊಡ್ಡ ಸಾಧನೆ. ಬಾಲ್ಯದಲ್ಲೇ ಶಿಸ್ತಿನ ಜೀವನ ಮೈಗೂಡಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಆಗ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಿಕ್ಷಕರು ಸಂಬಳ ಪಡೆಯುವುದಕ್ಕಾಗಿ ಮಾತ್ರ ಕೆಲಸ ಮಾಡದೆ, ಮಕ್ಕಳ ಭವಿಷ್ಯ ರೂಪಿಸಬೇಕು. ಈ ಕೆಲಸದಲ್ಲಿ ಬದ್ಧತೆ ಇರಬೇಕು. ಮಕ್ಕಳ ಶಿಕ್ಷಣದಲ್ಲಿ ಬದಲಾವಣೆ ತರುವ ಜತೆಗೆ ಅವರಲ್ಲಿರುವ ಪ್ರತಿಭೆಯನ್ನು ಹೊರ ತರಬೇಕು ಎಂದು ಕಿವಿಮಾತು ಹೇಳಿದರು.

ಮದ್ದೂರು ತಾಲೂಕಿನ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ಶಾಸಕನಾಗಿ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದೋ ಎಲ್ಲವನ್ನೂ ಮಾಡುತ್ತೇನೆ. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದರು.

ಶಿಕ್ಷಕರು ಆಧಾರ ಸ್ತಂಭವಾಗಿದ್ದು, ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಶಿಥಿಲಗೊಂಡಿರುವ ಶಾಲೆಗಳ ಕೊಠಡಿಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ಪ್ರಗತಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳಿರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ದೇವರಾಜು, ಕ್ಷೇತ್ರ ಸಮನ್ವಯ ಅಧಿಕಾರಿ ಹನುಮಶೆಟ್ಟಿ, ಶಿಕ್ಷಣಾಧಿಕಾರಿ ಲೋಕೇಶ್, ನಿವೃತ ಶಿಕ್ಷಕ ಲೋಕೇಶ್, ಶಿಕ್ಷಕರ ಸಂಘದ ವಿವಿಧ ಸಂಘಗಳ ಮುಖ್ಯಸ್ಥರಾದ ರವಿಕುಮಾರ್, ಉದಯ್, ಶಿವಲಿಂಗೇಗೌಡ, ಮಲ್ಲಿಕ್, ಜೋಗಿಗೌಡ, ಯೋಗಾನಂದ, ಪ್ರೇಮಾ, ಕವಿತಾ, ಕಿರಣ್, ತಿಮ್ಮೇಶ, ಶಿವಣ್ಣ ಹಾಗೂ ತಿಮ್ಮೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net