ಗುಣಮಟ್ಟದ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಲಿ

BYD SHIVANNA
Published on

ಬ್ಯಾಡಗಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಇಲಾಖೆ ವಿಶೇಷ ಆದ್ಯತೆ ನೀಡಿದ್ದು, ಗುಣಮಟ್ಟದ ಫಲಿತಾಂಶ ಪಡೆಯುವಲ್ಲಿ ತಾಲೂಕಿನ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಇಲ್ಲಿನ ಎಸ್​ಜೆಜೆಎಂ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜರುಗಿದ ‘ಆಸರೆ’ ಪೂರಕ ಕೈಪಿಡಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಿ ಹಾಗೂ ಅನುದಾನಿತ, ಅನುದಾನರಹಿತ ಶಾಲೆಯ ಮಕ್ಕಳು ಉತ್ತಮವಾಗಿ ಅಧ್ಯಯನದಲ್ಲಿ ತೊಡಗಲು ಶಿಕ್ಷಕ ಸಮೂಹ ಪ್ರೇರೇಪಣೆ ಹಾಗೂ ಸ್ಪೂರ್ತಿ ತುಂಬಬೇಕು. ಶಿಕ್ಷಣ ಇಲಾಖೆ ಕೂಡ ಆಯಾ ವಿಷಯ ಶಿಕ್ಷಕರ ಸಭೆ ನಡೆಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಿದೆ. ಸರ್ಕಾರ ಇದಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ನಿರ್ಲಕ್ಷ್ಯ ತೋರುವ ಮೂಲಕ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪಡೆಯುವಲ್ಲಿ ಹಿಂದುಳಿದ ಶಾಲೆಗಳನ್ನು ಗುರ್ತಿಸಿ, ಆ ಶಾಲೆಯ ಶಿಕ್ಷಕರನ್ನೆ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 43 ಪ್ರೌಢಶಾಲೆಗಳಿದ್ದು, ಈ ಪೈಕಿ 14 ಸರ್ಕಾರಿ, 17 ಅನುದಾನಿತ ಹಾಗೂ 8 ಅನುದಾನರಹಿತ ಸೇರಿ ಇನ್ನುಳಿದ ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 2137 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 850 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಎಲ್ಲ ಪಾಠಗಳು ಮುಗಿದಿದ್ದು, ಮನೆಮನೆಗೆ ತೆರಳಿದ ಶಿಕ್ಷಕರು ಮಕ್ಕಳ ಬಗ್ಗೆ ನಿಗಾ ಇಟ್ಟಿದ್ದಾರೆ. ಅಂತಹ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಮಕ್ಕಳ ಅಧ್ಯಯನ ಹಾಗೂ ಓದುವಿಕೆ ಸುಧಾರಣೆ ಸಲುವಾಗಿ ಜಿಲ್ಲಾ ಮಟ್ಟದ ವಿಷಯ ಪರೀಕ್ಷಕರು ಹಾಗೂ ಅನುಭವಿ ಶಿಕ್ಷಕರು ಸೇರಿ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಸರಳವಾಗಿ ಪರೀಕ್ಷೆ ಬರೆಯಲು ಕೈಪಿಡಿ ಸಿದ್ಧಪಡಿಸಿದ್ದಾರೆ. ಈ ಕುರಿತು ಜಿಲ್ಲಾ ಉಪನಿರ್ದೇಶಕರು ಬ್ಯಾಡಗಿ ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಕರಿಸಿದ್ದಾರೆ. ತಾವು ಸ್ಥಳೀಯ ಶಿಕ್ಷಣ ಪ್ರೇಮಿಗಳಾದ ಬಸವರಾಜ ಸುಂಕಾಪುರ ಇವರ ಆರ್ಥಿಕ ನೆರವಿನಿಂದ ತಾಲೂಕಿನ ಎಲ್ಲ ಮಕ್ಕಳಿಗೆ ಪೂರಕ ಪುಸ್ತಕ ವಿತರಿಸುತ್ತಿರುವುದಾಗಿ ತಿಳಿಸಿದರು.

ಶಿಕ್ಷಣ ಪ್ರೇಮಿ ಶಂಕರಲಿಂಗಪ್ಪ ಸುಂಕಾಪುರ, ಉಪಪ್ರಾಂಶುಪಾಲ ಜಯರಾಜ ಎಲ್.ಆರ್., ಡಾ.ಮಾಲತೇಶ ಬಂಡೆಪ್ಪನವರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಫ್. ಹುಲ್ಲಾಳ, ಆಶ್ರಯ ಸಮಿತಿ ಸದಸ್ಯರಾದ ದುರ್ಗೆಶ ಗೋಣೆಮ್ಮನವರ, ಗಿರೀಶಸ್ವಾಮಿ ಇಂಡಿಮಠ, ನಜೀರ ಅಹ್ಮದ್​ಶೇಖ್, ಬೀರೇಶ ಡೊಕ್ಲೇರ, ಪ್ರಕಾಶ ತಳವಾರ, ಮಾಲತೇಶ ಅರಳೀಮಟ್ಟಿ, ಮಂಜುನಾಥ ಉಪ್ಪಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net