ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಶಿಕ್ಷಕರು ರೂಪಿಸಲಿ

31-npk-1
ನಾಪೋಕ್ಲುವಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಕೈಪಿಡಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
Published on


ನಾಪೋಕ್ಲು: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಜತೆಗೆ ಕೌಶಲಗಳನ್ನು ಕಲಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಧನಂಜಯ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಪಾಜೆ ಘಟಕ ವತಿಯಿಂದ ಇತ್ತೀಚೆಗೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆ ಶಿಬಿರ, ಗೀತಗಾಯನ, ಮಕ್ಕಳ ಮೇಳಕ್ಕೆ ಎಲ್ಲರ ಸಲಹೆ ಮತ್ತು ಸಹಕಾರ ಅಗತ್ಯವಿದ್ದು, ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲೆ ಕೆ.ಡಿ.ನೀತಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶಿಸ್ತಿಗೆ ಹೆಸರುವಾಸಿ ಎಂದರು.

ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಮಕ್ಕಳನ್ನು ಸೋಪಾನ ಪರೀಕ್ಷೆಗೆ ಸಿದ್ಧಗೊಳಿಸುವ ಮೂಲಕ ಜಿಲ್ಲೆಯಿಂದ ಹೆಚ್ಚು ಮಕ್ಕಳು ರಾಜ್ಯ ಮಟ್ಟದಲ್ಲಿ ಪುರಸ್ಕಾರ ಪಡೆಯುವಂತಾಗಬೇಕು ಎಂದರು.

ರಾಜ್ಯ ಘಟಕ ಹೊರತಂದಿರುವ ವಾರ್ಷಿಕ ಕಾರ್ಯಕ್ರಮದ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ತರಬೇತಿ ಹೊಂದಿದ ಶಿಕ್ಷಕರು ಸಭೆ ಮತ್ತು ಸಮಾರಂಭಗಳಿಗೆ ಬರುವಾಗ ಸಮವಸ್ತ್ರವನ್ನು ಧರಿಸಿ ಬರಬೇಕು. ಅದಕ್ಕೆ ವಿಶೇಷವಾದ ಗೌರವವಿದ್ದು, ಅದನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ಕೆ.ಯು.ರಂಜಿತ್ ಮಾತನಾಡಿ, ಎಲ್ಲ ಶಾಲೆಗಳಲ್ಲಿ ದಳವಿರುವುದನ್ನು ಖಾತ್ರಿಪಡಿಸಬೇಕು. ಶಿಕ್ಷಣ ಇಲಾಖೆಯ ಒಂದು ಭಾಗವಾಗಿ ಸಂಸ್ಥೆ ಕೆಲಸ ಮಾಡುತ್ತಿರುವುದರಿಂದ ಶಾಲಾ ಮಕ್ಕಳಿಗೆ ಸಾಕಷ್ಟು ಪ್ರಯೋಜನಗಳಾಗುತ್ತಿವೆ ಎಂದರು.

ಸಂಸ್ಥೆ ಕಾರ್ಯದರ್ಶಿ ಉಷಾರಾಣಿ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಲಲಿತಾ ವಾರ್ಷಿಕ ಆಯವ್ಯಯ ಮಂಡನೆ ಮಾಡಿದರು. ಸ್ಕೌಟ್ಸ್ ಮಾಸ್ಟರ್ ಶ್ಯಾಮಿಲಿ ಅಂದಾಜು ಆಯವ್ಯಯ ಮಂಡಿಸಿದರೆ, ಅನುಷಾ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯನ್ನು ಓದಿದರು. ಸಭೆಯಲ್ಲಿ ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ ವಸಂತಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net