ಅಧ್ಯಾಪಕರು ಕಲಿಕಾ ಮನೋಭಾವ ಹೊಂದಲಿ: ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

mysore
Published on

ಮೈಸೂರು: ಬಹುತೇಕ ಅಧ್ಯಾಪಕರು ಅಧ್ಯಯನದಿಂದ ದೂರವಾಗುತ್ತಿದ್ದಾರೆ. ಸಮಕಾಲೀನವಾಗಿ ಬದುಕುವುದಿಲ್ಲವೋ ಅವರು ಯಶಸ್ವಿ ಅಧ್ಯಾಪಕನಾಗಲು ಸಾಧ್ಯವಿಲ್ಲ ಎಂದು ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.


ಬೆಂಗಳೂರಿನ ಅಭಿನವ ಸಹಯೋಗದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಅಧ್ಯಾಪಕರ ಕೌಶಲ ಬಲವರ್ಧನೆ ಕಲಿಸುತ್ತಾ ಕಲಿಯುವ ಪರಿ’ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.


ಅಧ್ಯಾಪಕರು ಯಾವಾಗಲೂ ಕಲಿಕಾ ಮನೋಭಾವ ಹೊಂದಬೇಕಾಗುತ್ತದೆ. ಅಧ್ಯಾಪಕನಿಗೆ ಯಾವುದೇ ವಿಷಯದಲ್ಲಿ ಪ್ರಭುತ್ವ ಇಲ್ಲದಿದ್ದರೆ, ಅತ್ಯುತ್ತಮ ಅಧ್ಯಾಪಕರಾಗಲು ಸಾಧ್ಯವಿಲ್ಲ. ಇವರಿಗೆ ಸವಾಲುಗಳಿವೆ. ಏಕೆಂದರೆ ಸದಾ ಯುವ ಮನಸ್ಸುಗಳ ಜತೆಗೆ ಮುಖಮುಖಿಯಾಗಿರಬೇಕಾಗುತ್ತದೆ. ಅಧ್ಯಾಪಕರು ಕಲಿಯುವುದರಲ್ಲಿ ಹಾಗೂ ಕಲಿಸುವುದರಲ್ಲಿ ಆಸಕ್ತಿ ಹೊಂದಿದ್ದರೆ ಯುವ ಮನಸ್ಸುಗಳ ಜತೆಗಿನ ಒಡನಾಟ, ಸಂತೋಷ ಮತ್ತು ಸಂಭ್ರಮವನ್ನು ತರುವುದರಲ್ಲಿ ಆಶ್ವರ್ಯವಿಲ್ಲ. ಏಕೆಂದರೆ, ವಿದ್ಯಾರ್ಥಿಗಳು ಎಂದು ಕೆಟ್ಟವರಾಗಿರುವುದಿಲ್ಲ. ಅವರಿಗೆ ಸರಿಯಾದ ಮಾದರಿ ಕೊಡಬೇಕಾಗಿದೆ ಎಂದರು.


ಇಂಗ್ಲೆಂಡ್ ಎಂದರೆ ರಾಜ ನೆನಪಿಗೆ ಬರಲ್ಲ. ಶೇಕ್ಸ್‌ಪಿಯರ್ ಶಾಶ್ವತವಾಗಿದ್ದಾನೆ. ಹೀಗಾಗಿ ಅಧ್ಯಾಪಕನ ಆಯ್ಕೆ ನಿಖರವಾಗಿರಬೇಕು. ಆಧುನಿಕ ವ್ಯವಸ್ಥೆಯಲ್ಲಿ ಕಾರ್ಪೋರೇಟ್ ಸಂಸ್ಕೃತಿ ಹೆಚ್ಚಾಗಿದೆ. ಶಿಕ್ಷಣ ವ್ಯಾಪಾರೀಕರಣವಾಗಿದೆ. ಬಹುಪಾಲು ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ಮಾರಾಟದ ವಸ್ತುವನ್ನಾಗಿಸಿದೆ. ಹಿಂದೆ ಶಿಕ್ಷಕರಿಂದ ಶಿಕ್ಷಣ ಸಂಸ್ಥೆಯನ್ನು ಗುರುತಿಸಲಾಗುತ್ತಿತ್ತು. ಆದರೆ, ಇಂದು ಅವರ ಸ್ಥಾನವನ್ನು ಬೇರೆಯವೇ ಆಕ್ರಮಿಸಿಕೊಂಡಿವೆ ಎಂದರು.


ಮಾಧ್ಯಮಗಳಲ್ಲಿ ಅಪರಾಧ, ಲೈಂಗಿಕ ದೌರ್ಜನ್ಯ ಇತ್ಯಾದಿ ಸಾಮಾಜಿಕ ಆರೋಗ್ಯ ಹಾಳು ಮಾಡುವ ಸುದ್ದಿಗಳೇ ಪ್ರಧಾನವಾಗಿವೆ. ಸಮಾಜ ತಾತ್ವಿಕವಾಗಿ ಯೋಚನೆ ಮಾಡುವ ಶಕ್ತಿ ಕಳೆದುಕೊಂಡಿದೆ. ವಾಗ್ವಾದ, ಸಂವಾದ ಬಹಳ ಶ್ರೇಷ್ಠ ಮಟ್ಟದ್ದು, ಆದರೆ ಇಂದು ಅದಾಗುತ್ತಿಲ್ಲ. ಹಿಂದಿನ ತಲೆಮಾರಿನ ಅಧ್ಯಾಪಕರಿಗಿರುವ ಸದಾ ತಾರುಣ್ಯದಿಂದ ಕೂಡಿರುವ ಉತ್ಸಾಹ, ಇಂದಿನ ಬಹುತೇಕ ಅಧ್ಯಾಪಕರಲ್ಲಿ ಮಾತ್ರವಲ್ಲ, ಬಹುತೇಕ ವಿದ್ಯಾರ್ಥಿಗಳಲ್ಲೂ ಇಲ್ಲದಿರುವುದು ವಿಪರ್ಯಾಸ ಎಂದು ವಿಷಾದವ್ಯಕ್ತಪಡಿಸಿದರು.


ಭಾರತೀಯ ಪರಿಕಲ್ಪನೆಯಲ್ಲಿ ಅಧ್ಯಾಪಕ ವೃತ್ತಿಗೆ ಮಹತ್ತರವಾದ ಪ್ರಾಶಸ್ತ್ಯವಿದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬ ಮನೋಭಾವ ಹಿಂದೆ ಇತ್ತು. ಈಗ ಇದು ಪ್ರಶ್ನಾರ್ಹವಾದ ಸಂಗತಿಯಾಗಿದೆ. ಇಂದು ಪ್ರತಿಭಾವಂತ ಮನಸ್ಸುಗಳು ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಿಂಜರಿಯುತ್ತವೆ. ಏಕೆಂದರೆ, ಸರ್ಕಾರಿ ಮತ್ತು ಖಾಸಗಿ ಎಂಬ ಶಿಕ್ಷಣ ವ್ಯವಸ್ಥೆಯ ಆರ್ಥಿಕ ಅಸಮಾನತೆಯಿಂದ. ಹೀಗಾಗಿ ಸಮಾಜದ ಆಯ್ಕೆ ಬದಲಾಗುತ್ತಾ ಹೋಯಿತು ಎಂದರು.


ಅಧ್ಯಾಪಕ ವೃತ್ತಿ ಎಲ್ಲ ವೃತ್ತಿಗಿಂತಲೂ ಪವಿತ್ರವಾದ ವೃತ್ತಿ. ಅದರಲ್ಲೂ ಕಾಲೇಜು ಅಧ್ಯಾಪಕರಿಗಿರುವ ಭಾಗ್ಯವೇ ಸರಿ. ಅಧ್ಯಾಪಕರು ಸದಾ ಯುವ ಮನಸ್ಸುಗಳ ಒಡನಾಟದಲ್ಲಿರುತ್ತಾರೆ. ಯೌವನಕ್ಕೆ ಉತ್ಸಾಹ, ಚೆಲುವು ಭಾಗ್ಯ ಇರುತ್ತದೆ. ಆದ್ದರಿಂದ ಕಾಲೇಜು ಅಧ್ಯಾಪಕರಾಗಿರುವವರು ಸದಾ ತಾರುಣ್ಯ ಮತ್ತು ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ. ಆದರೆ ಇಂದು ಕೆಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂತೋಷಪಡುವ ಮನಸ್ಸನ್ನು ಕಳೆದುಕೊಳ್ಳುತ್ತಿರುವುದು ಶಿಕ್ಷಣ ವ್ಯವಸ್ಥೆಯ ದುರಂತವೇ ಸರಿ ಎಂದರು.


ಅಧ್ಯಾಪಕರಿಗೆ ಪಾಠ ಮಾಡುವುದು ಒಂದು ಕಲೆ. ಅಧ್ಯಾಪಕ ಸರಿಯಾದ ಸಿದ್ಧತೆ ಇಲ್ಲದೆ ಬೋಧನೆ ಮಾಡಬಾರದು. ಎಲ್ಲಿ ಪ್ರೀತಿ, ಗೌರವ ಇರುವುದಿಲ್ಲವೋ ಅಲ್ಲಿ ಸಂಬಂಧ ಹಸನಾಗುವುದಿಲ್ಲ. ಪರಸ್ಪರ ಗೌರವ ಇರಬೇಕು. ಆರ್ಥಿಕ ಸೌಲಭ್ಯ ಬೇಕು ನಿಜ. ಅದು ಎಷ್ಟು ಬೇಕು ಎಂಬ ಪರಿಜ್ಞಾನವಿರಬೇಕು. ಹಣಕ್ಕೆ ಒಂದು ಹಂತದವರೆಗೆ ಪ್ರಾಮುಖ್ಯತೆ ಇದೆ. ನಂತರ ಇಲ್ಲ. ಇಂದು ಸಮಾಜ ಹಣದ ಬೆನ್ನತ್ತಿ ಹೋಗುತ್ತಿದೆ. ಅದು ಸರಿಯಲ್ಲ ಎಂದು ಹೇಳಿದರು.


ಅಧ್ಯಾಪಕರಾದವರು ವಿದ್ಯಾರ್ಥಿಗಳಿಗೆ ಓದಿನ ರುಚಿಯನ್ನು ಅಭ್ಯಾಸ ಮಾಡಿಸಬೇಕು. ಜತೆಗೆ ಆಕರ್ಷಕವಾಗಿ ಮಾತನಾಡುವುದನ್ನು ಕಲಿಯಬೇಕಾಗಿದೆ ಎಂದರು.


ಇಂದು ಸಮಾಜವೇ ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಅಧ್ಯಾಪಕರಾದವರು ಪ್ರೀತಿಸುವ ಶಕ್ತಿಯನ್ನು ಕಾಪಾಡಿಕೊಳ್ಳಬೇಕು. ಚೆಂದಾಗಿ ಬದುಕುವುದು ಒಂದು ಕಲೆ. ಅಧ್ಯಾಪಕರಿಗೆ ಇರಬೇಕಾಗಿರುವುದು ತಾಯಿಯ ಹೃದಯ. ವೈದ್ಯರು ದೇಹದ ಆರೋಗ್ಯವನ್ನು ಕಾಪಾಡುವಂತೆ ಅಧ್ಯಾಪಕರು ವಿದ್ಯಾರ್ಥಿಗಳ ಮನಸ್ಸಿನ ಆರೋಗ್ಯವನ್ನು ಕಾಪಾಡಬೇಕು ಎಂದರು.


ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್ ಮಾತನಾಡಿ, ಭಾರತೀಯ ಪರಂಪರೆ ಗುರುಗಳನ್ನು ತಂದೆ, ತಾಯಿಯ ಸ್ಥಾನದಲ್ಲಿ ನೋಡಿದೆ. ಅಧ್ಯಾಪಕರು ತಮ್ಮ ಹೊಣೆಗಾರಿಕೆಯನ್ನು ಎಂದು ಮರೆಯಬಾರದು ಎಂದು ತಿಳಿಸಿದರು.
ಲೇಖಕ ಅಭಿನವ ರವಿಕುಮಾರ್, ಪ್ರಾಂಶುಪಾಲರಾದ ಡಾ.ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್. ಆರ್.ತಿಮ್ಮೇಗೌಡ, ಅಧ್ಯಾಪಕರಾದ ಡಾ.ಪ್ರಿಯಾಂಕಾ ಶೆಣೈ ಮತ್ತು ಪ್ರೊ.ಶಿವಸ್ವಾಮಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net