

ಕುಂದಾಪುರ: ಜೀವನದ ಹೊಸ ಹಂತದಲ್ಲಿರುವ ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ಕಲಿತು ಮುಂದಿನ ಮೂರು ವರ್ಷದ ಪದವಿ ಜೀವನವು ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಬೇಕು. ದಿ.ಐ.ಎಂ.ಜಯರಾಮ್ ಶೆಟ್ಟಿ ಅವರ ಸಾಧನೆ, ಆಶಯ, ಹುರುಪು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಸದುಪಯೋಗವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ಪ್ರತಿಭೆ ಮುಕ್ತವಾಗಿ ಅನಾವರಣಗೊಳ್ಳಲಿ ಎಂದು ಶಿಕ್ಷಣ ತಜ್ಞೆ ಡಾ.ಚಿಂತನಾ ರಾಜೇಶ್ ಹೇಳಿದರು.
ಕುಂದಾಪುರದ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಪ್ರಥಮ ವರ್ಷದ ನೂತನ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮ ದೀಕ್ಷಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ.ಪಟೇಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೀಕ್ಷಾರಂಭ ನಿಮ್ಮ ಮುಂದಿನ ಜೀವನದ ಆರಂಭದ ಹೆಜ್ಜೆಯಾಗಿದೆ. ನಿಮ್ಮನ್ನು ನೀವು ಅರಿತು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಪಾಲಕರು ಮತ್ತು ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಮತ್ತು ಐಕ್ಯೂಎಸಿ ಸಂಯೋಜಕ ಜಯಶೀಲ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ವಾಣಿಜ್ಯ ಉಪನ್ಯಾಸಕಿ ಮಾಲತಿ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಜಯಶೀಲ್ ಕುಮಾರ್ ಸ್ವಾಗತಿಸಿದರು. ಗಣಕಶಾಸ್ತ್ರದ ಮುಖ್ಯಸ್ಥೆ ಸ್ವರ್ಣರಾಣಿ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅರ್ಚನಾ ಗದ್ದೆ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ವಾಣಿಜ್ಯ ಉಪನ್ಯಾಸಕಿ ದೀಕ್ಷಾ ಹರೀಶ್ ಜೆಪ್ಪು ನಿರೂಪಿಸಿದರು.