

ಗುಳೇದಗುಡ್ಡ: ಸ್ವಾಮಿಗಳು ಭಕ್ತರ ಮಾತು ಕೇಳಬೇಕು. ಭಕ್ತರು ದಾರಿ ತಪ್ಪಿದಾಗ ಬುದ್ಧಿ ಹೇಳುವ ನಿಷ್ಠರತೆ ಸ್ವಾಮಿಗಳಿಗಿರಬೇಕು. ಪರಸ್ಪರ ಎಚ್ಚರಿಸುವ ಸ್ವಭಾವ ಭಕ್ತರಿಗೆ, ಸ್ವಾಮಿಗಳಿಗೆ ಬಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಖಾ ಬ್ರಹನ್ಮಠದ ಸಾಣೇಹಳ್ಳಿಯ ಶ್ರೀ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗುರುಸಿದ್ಧೇಶ್ವರ ಮಠದಲ್ಲಿ ಸೋಮವಾರ ನಡೆದ ಗುರುಸಿದ್ಧೇಶ್ವರ ಶ್ರೀಗಳ 39ನೇ ಪುಣ್ಯಾರಾಧನೆಯ ಶರಣ ಸಂಗಮದ ಸಮಾರೋಪ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ನಾಡಿನಲ್ಲಿ ಮಠಗಳಿಗೆ ಕೊರತೆ ಇಲ್ಲ, ಸ್ವಾಮಿಗಳಿಗೂ ಕೊರತೆಯಿಲ್ಲ. ಆದರೆ, ಆದರ್ಶಗಳನ್ನು ಅಳವಡಿಸಿಕೊಂಡು, ತತ್ವಕ್ಕೆ ಬದ್ಧರಾದ ಶರಣ ಪರಂಪರೆ ಅಳವಡಿಸಿಕೊಂಡ ಮಠಗಳು ಎಷ್ಟಿವೆ ಎಂಬ ಪ್ರಶ್ನೆ ಬಂದಾಗ ಬೇಸರವಾಗುತ್ತದೆ. ಒಬ್ಬ ಕಾವಿಧಾರಿ ನ್ಯಾಯನಿಷ್ಠುರ, ದಾಕ್ಷಿಣ್ಯ ಪರನಲ್ಲ, ಲೋಕವಿರೋಧಿ ಶರಣ ಯಾರಿಗೂ ಅಂಜುವವನಲ್ಲ ಎಂಬ ಗಟ್ಟಿತನ ಕಾವಿಧಾರಿಗಳಿಗೆ ಇರಬೇಕು ಎಂದು ತಿಳಿಸಿದರು.
ಸ್ವಾಮಿಗಳಿಗೆ ಅಹಂಕಾರ ಅಪಯಾಕಾರಿ, ವಿನಾಶಕ್ಕೆ ಅಹಂಕಾರವೇ ಮೊದಲ ಮೆಟ್ಟಿಲು. ವಿನಯ ಮತ್ತು ವಿವೇಕ ನಮ್ಮ ಬದುಕಿನ ಬಂಡವಾಳವಾಗಬೇಕು. ಆಗ ಮಾತ್ರ ಸಮಾಜವನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲು ಸಾಧ್ಯ ಎಂದರು.
ಮಾಜಿ ಸಿ.ಎಂ. ಜಗದೀಶ ಶೆಟ್ಟರ ಮಾತನಾಡಿ, ದೇಶದಲ್ಲಿ ಇಂದು ಸಮಾಜ ಸಮಾಜದ ನಡುವೆ ಸಂಘರ್ಷದ ವಾತವರಣ ಏರ್ಪಡುತ್ತಿದ್ದು, ಇದು ನಿಲ್ಲಬೇಕು. ನಾಡಿನಲ್ಲಿ ಶಾಂತಿ ನೆಲಸಬೇಕು. ಸಮಾಜಗಳ ನಡುವೆ ಶಾಂತಿ, ಸೌಹಾರ್ದ ಉಂಟುಮಾಡುವ ನಿಟ್ಟಿನಲ್ಲಿ ನಾಡಿನ ಮಠಗಳು, ಶ್ರೀಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಗುರವಿನ ಆದರ್ಶ ಪರಂಪರೆ ನಾಡಿನಲ್ಲಿದೆ. ಗುರುಗಳ ಆದರ್ಶದಲ್ಲಿ ನಡೆಯವ ಲಕ್ಷಾಂತರ ಭಕ್ತರು ಇಲ್ಲಿದ್ದಾರೆ. ಮಠಮಾನ್ಯಗಳ ಮೇಲೆ ಭಕ್ತರಿಗೆ ಅಪಾರ ನಂಬಿಕೆ, ವಿಶ್ವಾಸ ಇಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಸಮಾಜ ತಿದ್ದುವ ಕೆಲಸವನ್ನು ಮಠ ಮಾನ್ಯಗಳು ಮಾಡಬೇಕಿದೆ ಎಂದರು.
ಹರಿಹರ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಸ್ವಾಮಿಗಳು, ಹಂಪಿಗಾಯತ್ರಿ ಪೀಠದ ದಯಾನಂದ ಸ್ವಾಮಿಗಳು, ಚಿತ್ರದುರ್ಗ ಬೋವಿ ಗುರುಪೀಠದ ಇಮ್ಮಡಿಸಿದ್ಧರಾಮೇಶ್ವರ ಶ್ರೀಗಳು, ತಪ್ಪಸ್ಸಿಹಳ್ಳಿಯ ದಿವ್ಯಜ್ಞಾನಾನಂದಗಿರಿ ಸ್ವಾಮಿಗಳು, ಗದಗಬೆಟಗೇರಿಯ ನೀಲಕಂಠ ಪಟ್ಟದಾರ್ಯ ಸ್ವಾಮಿಗಳು, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಪ ಸದಸ್ಯ ಪಿ.ಎಚ್. ಪೂಜಾರ, ಮಾಜಿ ವಿಪ ಸದಸ್ಯ ಎಸ್.ಆರ್. ಪಾಟೀಲ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು.
ಶ್ರೀಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ರಾಜನಹಳ್ಳಿ ಗುರುಪೀಠದ ಪ್ರಸನ್ನಾಂದ ಪುರಿಸ್ವಾಮಿಗಳು, ಹುಬ್ಬಳ್ಳಿಯ ವೀರಭೀಕ್ಷಾವರ್ತಿ ಮಠದ ಶ್ರೀ.ಜ. ಶಿವಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತ, ಎಂ.ಡಿ. ಲಕ್ಷ್ಮೀನಾರಾಯಣ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಎಸ್. ಸೋಮಶೇಖರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇತರರಿದ್ದರು.