ವಿದ್ಯಾರ್ಥಿಗಳು ಗುರಿಯೊಂದಿಗೆ ವ್ಯಾಸಂಗ ಮಾಡಲಿ

29 KRN-4
ಯುಪಿಎಸ್‌ಸಿ ಪರೀಕ್ಷೆಯಲ್ಲಿ 263ನೇ ರಾಂಕ್ ಪಡೆದ ಎ.ಸಿ.ಪ್ರೀತಿ ಮತ್ತು ಅವರ ಪಾಲಕರನ್ನು ಕೆ.ಆರ್.ನಗರದ ಆಲ್ಫಾ ಕಾಲೇಜಿನಲ್ಲಿ ಅಭಿನಂದಿಸಲಾಯಿತು. ಡಿ.ಬಿ.ನಟೇಶ್, ಸಿ.ಡಿ.ಮಹದೇವಪ್ಪ, ಸುಬ್ರಹ್ಮಣ್ಯ, ಕೆ.ಎಲ್.ಜಗದೀಶ್, ಕೆ.ಎಲ್.ರಮೇಶ್, ರಶ್ಮಿ ಇದ್ದರು.
Published on

ಕೆ.ಆರ್.ನಗರ: ಓದನ್ನು ಪ್ರೀತಿಸದಿದ್ದರೆ ಓದು ಹೊರೆ ಎನಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದನ್ನು ಪ್ರೀತಿಸಬೇಕು. ಯುಪಿಎಸ್‌ಸಿ ಸಾಧಕಿ ಎ.ಸಿ.ಪ್ರೀತಿ ಅವರನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಗುರಿಯೊಂದಿಗೆ ವ್ಯಾಸಂಗ ಮಾಡಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಒ ಡಿ.ಬಿ.ನಟೇಶ್ ಸಲಹೆ ನೀಡಿದರು.

ಪಟ್ಟಣದ ಆಲ್ಫಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 263ನೇ ರಾಂಕ್ ಪಡೆದ ಎ.ಸಿ.ಪ್ರೀತಿ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಮೊಬೈಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಗುರಿ ಇಟ್ಟು ವಿದ್ಯೆಯ ಕಡೆ ಗಮನಹರಿಸಿದರೆ ಸಾಧನೆ ಕಷ್ಟವಲ್ಲ. ಆದ್ದರಿಂದ ವಿದ್ಯಾರ್ಥಿಗಳು ಓದಿವಿನ ಕಡೆ ಹೆಚ್ಚು ಗಮನಹರಿಸಿ ಎಂದು ತಿಳಿಸಿದರು.

ಎ.ಸಿ.ಪ್ರೀತಿ ಮಾತನಾಡಿ, ನನಗೆ ನನ್ನ ತಂದೆ ತಾಯಿಯೇ ಸ್ಫೂರ್ತಿ, ನಾನು ಏನಾದರೂ ಸಾಧಿಸಬೇಕೆಂಬ ಛಲ ಮತ್ತು ಹಠ ಹುಟ್ಟಲು ನನಗೆ ಸಲಹೆ ನೀಡಿದ ನನ್ನ ಗುರುಗಳಾದ ಆಲ್ಫಾ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರೇ ಕಾರಣ. ಯುಪಿಎಸ್‌ಸಿಯಲ್ಲಿ 263ನೇ ರಾಂಕ್ ಪಡೆದ ನಾನು ಈ ಕಾಲೇಜಿನಲ್ಲಿ ಮಾತನಾಡಲು ಒಂದು ಕಾರಣವಿದೆ. ನನ್ನಂತೆ ನೀವು ಸಹ ಗುರಿ ಸಾಧಿಸಬೇಕೆಂಬ ಸಲಹೆ ನೀಡಲು ಬಂದಿದ್ದೇನೆ ಎಂದು ತಿಳಿಸಿದರು.

ಉನ್ನತ ವಿದ್ಯಾಭ್ಯಾಸಕ್ಕೆ ಭಾಷೆ ಅಡ್ಡಿಯಿಲ್ಲ. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ನನ್ನಂತಹ ಎಷ್ಟೋ ಮಂದಿ ಐಎಎಸ್, ಐಪಿಎಸ್ ಜತೆಗೆ ಬೇರೆ ಬೇರೆ ವಿಭಾಗಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಅದರಂತೆ ಆಲ್ಫಾ ಕಾಲೇಜಿನ ಮುಖ್ಯಸ್ಥರಲ್ಲಿ ಮನವಿ ಮಾಡುತ್ತೇನೆ ಪಿಯು ನಂತರ ಏನು ಮಾಡಬೇಕೆಂಬ ಆತಂಕದಲ್ಲಿರುವ ಈ ಸಹೋದರ, ಸಹೋದರಿಯರಿಗೆ ಅನುಭವವಿರುವ ಯಾರನ್ನಾದರೂ ಕರೆಸಿ ಎಲ್ಲ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಿ ಎಂದು ಮನವಿ ಮಾಡಿದರು.

ಆಲ್ಫಾ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ, ವಕೀಲ ಸಿ.ಡಿ.ಮಹದೇವಪ್ಪ ಮಾತನಾಡಿದರು. ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಎ.ಸಿ.ಪ್ರೀತಿ ಅವರ ತಾಯಿ ನೇತ್ರಾವತಿ, ತಂದೆ ಚನ್ನಬಸಪ್ಪ, ಶಿಕ್ಷಕಿ ರಶ್ಮಿ, ಮುಖಂಡ ಗೋವಿಂದೇಗೌಡ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net