

ಅರಸೀಕೆರೆ: ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ದುಶ್ಚಟಗಳಿಂದ ದೂರವಿರಬೇಕು ಎಂದು ನಗರಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಹೇಳಿದರು.
ಗ್ರಾಮಾಂತರ, ನಗರ ಠಾಣೆ ಹಾಗೂ ಕೋಡಿಮಠ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಇತ್ತೀಚೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಆಧುನಿಕ ಜೀವನ ಶೈಲಿ ಭರಾಟೆಯಲ್ಲಿ ವಿದ್ಯಾರ್ಥಿಗಳು ಗಾಂಜಾ, ಅಫೀಮು ಸೇರಿದಂತೆ ಅಮಲುಕಾರಕ ಪದಾರ್ಥಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಸಂಗತಿ. ಕಲಿಕೆ ಅವಧಿಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವತ್ತ ಆಲೋಚನೆ ಮಾಡಬೇಕು. ಪಾಲಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸದಿದ್ದರೆ ಭವಿಷ್ಯ ಮಸುಕಾಗಲಿದೆ ಎಂದು ಹೇಳಿದರು.
ಪಿಎಸ್‌ಐ ದಿಲೀಪ್‌ಕುಮಾರ್ ಮಾತನಾಡಿ, ಮಾದಕ ವಸ್ತುಗಳ ಮಾರಾಟ, ಪ್ರಚೋದನೆ ಮತ್ತು ಸೇವನೆ ಕಾನೂನು ಬಾಹಿರ. ಅಕ್ರಮ ದಂಧೆ ಕುರಿತು ಮಾಹಿತಿ ಲಭ್ಯವಾದಲ್ಲಿ ಠಾಣೆಗೆ ದೂರು ನೀಡಬಹುದು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಕುಟುಂಬಕ್ಕೆ ನೋವು ನೀಡಬಾರದು. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿ ಮುಖಂಡ ಪೃಥ್ವಿ ನಾಯ್ಕ ಸೇರಿದಂತೆ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.