ವಿದ್ಯಾರ್ಥಿಗಳು ಓದುವ ಸಂಸ್ಕೃತಿಗೆ ಮರಳಲಿ

 ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯದುನಂದನ ಪ್ರಕಾಶನ ಸಂಸ್ಥೆಯವರು ಕಾಲೇಜಿನ ಗ್ರಂಥಾಲಯಕ್ಕೆ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲ ಪ್ರೊ.ಮಂಜು, ಪ್ರೊ.ನಂಜುಂಡಸ್ವಾಮಿ, ರಾಜಶೇಖರ್ ಇತರರು ಇದ್ದರು.
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯದುನಂದನ ಪ್ರಕಾಶನ ಸಂಸ್ಥೆಯವರು ಕಾಲೇಜಿನ ಗ್ರಂಥಾಲಯಕ್ಕೆ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲ ಪ್ರೊ.ಮಂಜು, ಪ್ರೊ.ನಂಜುಂಡಸ್ವಾಮಿ, ರಾಜಶೇಖರ್ ಇತರರು ಇದ್ದರು.
Published on

ಹುಣಸೂರು: ವಿದ್ಯಾರ್ಥಿಗಳು ಕೇಳುವ ಮತ್ತು ನೋಡುವ ಸಂಸ್ಕೃತಿಯನ್ನು ತ್ಯಜಿಸಿ ಓದುವ ಸಂಸ್ಕೃತಿಗೆ ಮರಳುವ ಅಗತ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕನ್ನಡ ವಿಭಾಗದ ವತಿಯಿಂದ ಮೈಸೂರಿನ ಯದುನಂದನ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಕಾಲೇಜು ಗ್ರಂಥಾಲಯಕ್ಕೆ ಉಚಿತವಾಗಿ 200ಕ್ಕೂ ಹೆಚ್ಚು ಪುಸ್ತಕಗಳ ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಓದುವ ಹವ್ಯಾಸ ಸಹಜವಾಗಿ ಎಲ್ಲರಲ್ಲೂ ಇತ್ತು. ವಿದ್ಯಾರ್ಥಿ ಜೀವನದಲ್ಲಿ ಮಹನೀಯರ ಜೀವನಗಾಥೆ, ನಾಟಕ, ಕಲೆ, ಸಾಹಿತ್ಯ, ಸಂಸ್ಕೃತಿ, ಪ್ರಚಲಿತ ವಿದ್ಯಮಾನ ಎಲ್ಲವನ್ನೂ ಅಕ್ಷರದ ರೂಪದಲ್ಲಿ ಪಡೆಯುತ್ತಿದ್ದೆವು. ಆದರೆ ಇದೀಗ ಆಧುನಿಕ ತಂತ್ರಜ್ಞಾನ ನಮಗೆ ಬೆರಳ ತುದಿಯಲ್ಲೇ ಮಾಹಿತಿಯನ್ನು ನೀಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಕೇಳುವ ಮತ್ತು ನೋಡುವ ಸಂಸ್ಕೃತಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯನ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಓದುವ ಹವ್ಯಾಸ ಮಾತ್ರ ಉತ್ತಮ ವೇದಿಕೆಯಾಗಬಲ್ಲದು. ಓದು ಜ್ಞಾನದ ಬೆಳಕನ್ನು ನೀಡುತ್ತದೆ. ಯಾರೂ ಕದಿಯಲಾಗದ ಸಂಪತ್ತು ವಿದ್ಯೆ. ಯದುನಂದನ ಪ್ರಕಾಶನವು ವಿದ್ಯಾರ್ಥಿಗಳಿಗಾಗಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿರುವ ಉದ್ದೇಶ ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳಸಿಕೊಳ್ಳಿರಿ ಎನ್ನುವುದಾಗಿದೆ. ವಿವಿಧ ಪ್ರಕಾರಗಳ ಪುಸ್ತಕ ನಿಮ್ಮ ಗೆಳೆಯರಾಗಲಿ. ಓದುವ ಪ್ರವೃತ್ತಿ ಹೊಂದಿದವರು ಉದ್ಯೋಗ ಸಂದರ್ಶನದ ವೇಳೆ ಅವರ ಸ್ಫುಟಮಾತು, ಕ್ರಿಯಾಶೀಲ ಯೋಚನೆಗಳು ಸರಾಗವಾಗಿ ಹೊರಬರಲು ಸಾಧ್ಯವಿದೆ ಎಂದರು.

ಯದುನಂದನ ಪ್ರಕಾಶನದ ಮುಖ್ಯಸ್ಥ, ಯುವ ಸಾಹಿತಿ ರಾಜೇಶ್ ಹೊನ್ನೇನಹಳ್ಳಿ ಮಾತನಾಡಿ, ಓದುವ ಹವ್ಯಾಸವಿದ್ದರೆ ಲಾಭವೇನೆಂದು ಕೇಳದಿರಿ. ಓದುವ ಪ್ರವೃತ್ತಿ ನಿಮ್ಮಲ್ಲಿದ್ದರೆ ನೀವು ಈ ಸಮಾಜಕ್ಕೆ ಒಬ್ಬ ಉತ್ತಮ ಸನ್ನಡತೆಯ ವ್ಯಕ್ತಿಯಾಗುತ್ತೀರಿ ಎನ್ನುವುದಂತೂ ಖಂಡಿತ. ಪುಸ್ತಕ ಪ್ರಕಾಶನ ಅಷ್ಟು ಸುಲಭದ ಕಾರ್ಯವಲ್ಲ. ಒಂದು ಪುಸ್ತಕ ಹೊರಬರಲು ನೂರಾರು ಕೈಗಳ ಶ್ರಮವಿದೆ. ಆ ಕುಟುಂಬಗಳ ಭವಿಷ್ಯ ಪುಸ್ತಕ ಪ್ರಕಾಶನದಲ್ಲಿದೆ. ಹಾಗಾಗಿ ನೀವು ಓದಿದಲ್ಲಿ ನಿಮ್ಮ ಜ್ಞಾನದ ವೃದ್ಧಿಯ ಜತೆಗೆ ಪ್ರಕಾಶನ ಕುಟುಂಬದ ಬದುಕು ಬೆಳಕಾಗುತ್ತದೆ ಎಂದರು.

ಪ್ರಾಂಶುಪಾಲ ಪ್ರೊ.ಮಂಜು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ನಿಂಗರಾಜು ಮಾತನಾಡಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ , ಪ್ರಾಧ್ಯಾಪಕರಾದ ರಾಜಶೇಖರ್, ಡಾ.ಕರುಣಾಕರ್, ಮಂಜುನಾಥ್, ಡಾ.ಕೆ.ಪಿ.ಪ್ರಸನ್ನ, ಪುಟ್ಟಶೆಟ್ಟಿ ಇತರರು ಇದ್ದರು. ಪ್ರಾಂಶುಪಾಲ ಪ್ರೊ.ಮಂಜು ಪ್ರಕಾಶಕರಿಂದ ಪುಸ್ತಕ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net