ವಿದ್ಯಾರ್ಥಿಗಳು ಶುಚಿತ್ವಕ್ಕೆ ಆದ್ಯತೆ ನೀಡಲಿ

30 RON-1
Published on

ರೋಣ: ನಾವು ವಾಸಿಸುವ ಪರಿಸರದ ಸ್ವಚ್ಛತೆ ಹಾಗೂ ಶುಚಿತ್ವದ ಕೊರತೆಯಿಂದ ಸಾಂಕ್ರಾಮಿಕ ರೋಗಗಳನ್ನು ನಮಗೆ ಅರಿವಿಲ್ಲದಂತೆ ನಾವೇ ಆಹ್ವಾನಿಸುತ್ತಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮಲ್ಲಿಕಾರ್ಜುನ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಎಸ್. ಕೆಂಗಾರ ಹೇಳಿದರು.

ಪಟ್ಟಣದ ಮಲ್ಲಿಕಾರ್ಜನ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ಜರುಗಿದ ಸ್ವಚ್ಛತಾ ಸೇವಾ ಅಭಿಯಾನದಲ್ಲಿ ಮಾತನಾಡಿದರು.
ಕಲುಷಿತ ವಾತಾವರಣದಲ್ಲಿ ರೋಗಗಳು ಬೇಗ ಹರಡುತ್ತವೆ. ರೋಗಕ್ಕೆ ತುತ್ತಾಗುವ ಮೊದಲೇ ಅದನ್ನು ತಡೆಯುವುದಕ್ಕೆ ಪ್ರಯತ್ನಿಸಬೇಕು. ವೈಯಕ್ತಿಕ, ಮಾನಸಿಕ, ಶಾರೀರಕ ಹಾಗೂ ಪರಿಸರ ಸ್ವಚ್ಛತೆಯನ್ನು ಮಾಡಿದಾಗ ರೋಗಗಳು ನಮ್ಮತ್ತ ಸುಳಿಯುವುದಿಲ್ಲ ಎಂದರು.

ವಿದ್ಯಾರ್ಥಿಗಳು ಸ್ವಚ್ಛತೆಯ ಗುಣ ಮೈಗೂಡಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ವಾತಾವರಣ ಹಾಗೂ ಜೀವನ ಸಾಗಿಸುವ ಮನೆ, ಕಾಲೇಜು ಸ್ವಚ್ಛವಾಗಿದ್ದರೆ ಓದಲು ಆಸಕ್ತಿ ಮೂಡುತ್ತದೆ ಎಂದರು.

ಮುಖ್ಯಶಿಕ್ಷಕ ನಾಗನಗೌಡ ಭೀಮನಗೌಡ್ರ ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಹಾತ್ಮ ಗಾಂಧೀಜಿ ಕನಸಿನ ಭಾರತ ನಿರ್ಮಾಣವಾಗುತ್ತದೆ. ಮನೆ ಸುತ್ತಲಿನ ಪ್ರದೇಶಗಳು, ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಾದ ಶಾಲೆ, ಆಸ್ಪತ್ರೆ, ಅಂಗನವಾಡಿ, ಸಮುದಾಯ ಭವನ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಸ್ವಚ್ಛತೆ ಕಾಪಾಡುವ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳ ನಾಲ್ಕು ತಂಡ ರಚಿಸಿ ಕಾಲೇಜಿನ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಲಾಯಿತು. ಎ.ಟಿ. ದಾಸರ, ಜಿ.ಎಫ್. ಮಾದರ ಕೆ.ಎನ್. ಕೊಳ್ಳಿ, ಸಿ.ಎಸ್. ಬ್ಯಾಳಿ, ವೈ. ಎನ್.ನಿಡಗುಂದಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net