ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲಿ

6spt1
Published on


ಸೋಮವಾರಪೇಟೆ : ಕಲಿಕೆ ನಿಂತ ನೀರಲ್ಲ, ನಿರಂತರವಾಗಿದ್ದು, ವಿದ್ಯಾರ್ಥಿಗಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಹೇಳಿದರು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಶನಿವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


ಅರಳುವ ಹೂಗಳು ವಿದ್ಯಾರ್ಥಿಗಳಾಗಬೇಕು. ಇವತ್ತಿನಿಂದಲೇ ಮೊಬೈಲ್ ಗೀಳಿನಿಂದ ಹೊರಬಂದರೆ ಸಾಧನೆಯ ಮೆಟ್ಟಿಲು ಏರಬಹುದು. ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.


ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಅತಿಥಿ ಶಿಕ್ಷಕರ ಕೊಡುಗೆ ತುಂಬ ಇದೆ. ಕಡಿಮೆ ಸಂಬಳಕ್ಕೆ ಹೆಚ್ಚಿನ ಸಮಯ ದುಡಿಯುತ್ತಿದ್ದಾರೆ. ಅವರ ವೇತನ ಕೂಡ ಹೆಚ್ಚಾಗಬೇಕು. ಮುಂದೆ ದ್ವಿತೀಯ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ಎಲ್ಲ ವಿದ್ಯಾರ್ಥಿಗಳಿಗೆ ವೈಯುಕ್ತಿವಾಗಿ ಐದು ಸಾವಿರ ರೂ. ಪ್ರೋತ್ಸಾಹಧನ ನೀಡುತ್ತೇನೆ ಎಂದು ಹೇಳಿದರು.


ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಪುಟ್ಟರಾಜು ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯೆಗೆ ಬಡವ, ಶ್ರೀಮಂತ ಎಂಬ ಭೇದಭಾವವಿಲ್ಲ. ಸತತ ಪರಿಶ್ರಮದಿಂದ ಮಾತ್ರ ಶೈಕ್ಷಣಿಕ ಸಾಧನೆ ಮಾಡಬಹುದು ಎಂದು ಹೇಳಿದರು.


ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಎ.ಲಾರೇನ್ಸ್ ಮಾತನಾಡಿ, ಕಾಲೇಜಿನಲ್ಲಿ ಆಸರೆ ಯೋಜನೆ ಜಾರಿಯಲ್ಲಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಪದವಿ ವ್ಯಾಸಂಗಕ್ಕೆ ಪ್ರತಿ ವರ್ಷ 5ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರಸಕ್ತ 11 ವಿದ್ಯಾರ್ಥಿಗಳು ಅಸರೆ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ದಾನಿಗಳ ಸಹಕಾರದಿಂದ ಆಸರೆ ಪ್ರತಿಭಾವಂತರಿಗೆ ಆಸರೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ತಿಮ್ಮಯ್ಯ, ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ನಂದಕುಮಾರ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲೀಪ್‌ವಾಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಟಿ.ಅರ್ಜುನ್, ಹಿರಿಯ ಉಪನ್ಯಾಸಕರಾದ ಬಿ.ಬಿ.ಲಿಲಿತಾ, ಹೇಮಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net