

ಮುಂಡರಗಿ: ಪೊಲೀಸ್ ಎಂದರೆ ಭಯಬೇಡ. ಪೊಲೀಸರು ಇರುವುದೇ ಪ್ರಜಾ ರಕ್ಷಣೆಗೋಸ್ಕರ. ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಸಮರ್ಪಕವಾಗಿ ಅರಿತುಕೊಳ್ಳಬೇಕು. ಹಾಗೆಯೇ ಕಾನೂನನ್ನು ಎಲ್ಲರೂ ಸರಿಯಾಗಿ ಪಾಲನೆ ಮಾಡಬೇಕು. ಆ ಮೂಲಕ ದೇಶದ ಅಭಿವೃದ್ಧಿ ಮತ್ತು ಏಳಿಗೆಯಲ್ಲಿ ಸದಾ ತೊಡಗಿಕೊಳ್ಳಬೇಕು ಎಂದು ಪಿಎಸ್ಐ ವಿ.ಜಿ. ಪವಾರ ಹೇಳಿದರು.
ಪಟ್ಟಣದ ಶಾರದಾ ಕರಿಯರ್ ಅಕಾಡೆಮಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಹೊಸ ಕಾಯ್ದೆ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಅಪರಾಧ ಕೃತ್ಯಗಳಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಯಾರೂ ಅಪರಾಧ ಕೃತ್ಯಗಳಲ್ಲಿ ಪಾಲ್ಕೊಳ್ಳುವುದು, ಇನ್ನೊಬ್ಬರಿಗೆ ಪ್ರಚೋದನೆ ನೀಡಬಾರದು. ಯಾವುದೇ ರೀತಿ ಸಮಸ್ಯೆಗಳಿದ್ದರೂ 112 ಸಹಾಯವಾಣಿಗೆ ಕರೆ ಮಾಡಿ ನೆರವು ಕೇಳಬೇಕು ಎಂದು ತಿಳಿಸಿದರು.
ಶಾರದಾ ಕರಿಯರ್ ಅಕಾಡೆಮಿ ನಿರ್ದೇಶಕ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಮಕ್ಕಳು ಕಾನೂನುಗಳನ್ನು ಮೀರಬಾರದು. ಅಪರಾಧಗಳಲ್ಲಿ ಭಾಗವಹಿಸಬಾರದು. ಅಪರಾಧಗಳು ಕಂಡುಬಂದಲ್ಲಿ ತಕ್ಷಣವೇ ಧೃತಿಗೆಡದೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂದಾಗ ಮಾತ್ರ ಅಪರಾಧ ಕೃತ್ಯ ತಡೆಯಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮುಕ್ಕಣ್ಣ ಪೂಜಾರಿ, ಗಂಗಾಧರ ಗ್ರಾಮೀಣ ಹಾಗೂ ನಗರದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶ ಹಡಪದ, ಸದಸ್ಯರಾದ ಮಂಜುಳಾ ಹಡಪದ, ಶಿಕ್ಷಕರಾದ ಗುಡದಪ್ಪ , ರಂಜಿತಾ, ಕಾವೇರಿ, ಶಕುಂತಲಾ, ರೇಖಾ, ಡ್ಯಾನ್ಸ್ ಮಾಸ್ಟರ್ ಗುಡದಪ್ಪ ಶೀರನಹಳ್ಳಿ ಉಪಸ್ಥಿತರಿದ್ದರು.