ವಿದ್ಯಾರ್ಥಿಗಳು ಕೃಷಿ ಅನುಭವ ಪಡೆಯಲಿ

oplus_131074
ವಿವಿಧ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು.
Published on

ವಿರಾಜಪೇಟೆ: ಆಧುನಿಕ ಜೀವನ ಶೈಲಿ ಹಿನ್ನೆಲೆಯಲ್ಲಿ ಕೃಷಿ ಭೂಮಿಯಿಂದ ದೂರ ಉಳಿದ ಯುವಜನತೆ ಒಂದು ದಿನವಾದರೂ ಕೃಷಿ ಸಂಪರ್ಕಕ್ಕೆ ಬಂದು ರೈತರ ಬದುಕಿನ ಅನುಭವ ಪಡೆಯಬೇಕು ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ದಾನ ಆಶಯ ವ್ಯಕ್ತಪಡಿಸಿದರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ನಿವೃತ್ತ ಪೊಲೀಸ್ ಉನ್ನತಾಧಿಕಾರಿ ಬಿ.ಡಿ.ಮಂದಪ್ಪ ಅವರ ಗದ್ದೆಯಲ್ಲಿ ಬುಧವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿ, ಇತ್ತೀಚಿನ ವರ್ಷದಲ್ಲಿ ಯುವಜನತೆ ಕೃಷಿ ಭೂಮಿಯಿಂದ ದೂರ ಸರಿಯುತ್ತಿದ್ದಾರೆ. ಹಿಂದಿನ ಕಾಲದಲ್ಲಿದ್ದ ಕೃಷಿ ಭೂಮಿಯ ಜತೆಗಿನ ಅವಿನಾಭಾವ ಸಂಬಂಧ ಇಲ್ಲವಾಗುತ್ತಿದೆ. ವಿದ್ಯಾರ್ಥಿಗಳು ಕೃಷಿ ಭೂಮಿಯಿಂದ ವಿಮುಖರಾಗುತ್ತಿದ್ದಾರೆ. ವರ್ಷದಲ್ಲಿ ಒಂದು ಬಾರಿಯಾದರೂ ವಿದ್ಯಾರ್ಥಿಗಳು ಕೃಷಿಯ ಅನುಭವ ಪಡೆಯಬೇಕು. ವಿದ್ಯಾರ್ಥಿಗಳು ತಮ್ಮ ನಿತ್ಯದ ಜಂಜಾಟ ಮರೆತು ಪ್ರಕೃತಿಯ ಮಧ್ಯೆ ಕೃಷಿಭೂಮಿ, ನೀರು, ಕೆಸರು, ಮಳೆ ಮುಂತಾದವುಗಳ ಅನುಭವ ಪಡೆದು ಸಂಭ್ರಮಿಸಿ ದೈಹಿಕ ಹಾಗೂ ಮಾನಸಿಕವಾಗಿ ಪುನಶ್ಚೇತನಗೊಳಿಸಲು ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ ಮುದ್ದಪ್ಪ ಮಾತನಾಡಿ, ಕೃಷಿಯು ನಮಗೆ ಪೂರ್ವಜರಿಂದ ಬಂದ ಬಳುವಳಿ. ಆದರೆ ಇತ್ತೀಚೆಗೆ ಆಧುನಿಕ ಬದುಕಿನ ಜಂಜಾಟದಲ್ಲಿ ಕಣ್ಮರೆಯಾಗುತ್ತಿರುವ ಈ ಕೃಷಿ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಕೃಷಿ ಭೂಮಿಯೊಂದಿಗೆ ವಿದ್ಯಾರ್ಥಿಗಳ ಒಡನಾಟ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಹಕಾರ, ಒಗ್ಗಟ್ಟು, ಕ್ರೀಡಾ ಮನೋಭಾವ ಹೆಚ್ಚಿಸುವುದರೊಂದಿಗೆ ಒಂದು ದಿನವಾದರೂ ಕೃಷಿ ಭೂಮಿಯ ಆಹ್ಲಾದ ಪಡೆಯುವಂತೆ ಮಾಡಲು ಕ್ರೀಡಾಕೂಟ ಆಯೋಜಿಸಲಾಗಿದೆ. ಇದೇ ರೀತಿ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಕ್ರೀಡೆ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ಓಟದ ಸ್ಪರ್ಧೆ, ಹಗ್ಗಜಗ್ಗಾಟ, ಫುಟ್ಬಾಲ್, ಥ್ರೋಬಾಲ್ ಹಾಗೂ ಟ್ರೆಷರ್‌ಹಂಟ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಹುಡುಗರ ವಿಭಾಗದಲ್ಲಿ ಓಟದ ಸ್ಪರ್ಧೆಯಲ್ಲಿ ಓಶಿನ್ ಬೋಪಯ್ಯ ಪ್ರಥಮ, ಭವಿಷ್ ದ್ವಿತೀಯ, ಲಿಖಿತ್ ತೃತೀಯ ಸ್ಥಾನ ಪಡೆದರು. ಹಗ್ಗಜಗ್ಗಾಟದಲ್ಲಿ ಕಪ್ಪು ತಂಡ ಪ್ರಥಮ, ಹಸಿರು ತಂಡ ದ್ವಿತೀಯ ಸ್ಥಾನ ಪಡೆಯಿತು. ಫುಟ್ಬಾಲ್‌ನಲ್ಲಿ ಹಸಿರು ತಂಡ ಪ್ರಥಮ, ಕೆಂಪು ತಂಡ ದ್ವಿತೀಯ ಸ್ಥಾನ ಪಡೆಯಿತು. ಟ್ರಫರ್ ಹಂಟ್ ವಿಭಾಗದಲ್ಲಿ ಕಪ್ಪು ತಂಡ ಪ್ರಥಮ, ಕೆಂಪು ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ವಿಭಾಗದಲ್ಲಿ ಓಟದ ಸ್ಪರ್ಧೆಯಲ್ಲಿ ಶಮ್ಲಾ ಪ್ರಥಮ, ರೀಷ್ಮಾ ದ್ವಿತೀಯ, ಹೇಮಾವತಿ ತೃತೀಯ ಸ್ಥಾನ ಪಡೆದರು. ಹಗ್ಗಜಗ್ಗಾಟದಲ್ಲಿ ಕಪ್ಪು ತಂಡ ಪ್ರಥಮ, ಹಸಿರು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಥ್ರೋಬಾಲ್‌ನಲ್ಲಿ ಹಸಿರು ತಂಡ ಪ್ರಥಮ, ನೀಲಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಟ್ರೆಷರ್ ಹಂಟ್‌ನಲ್ಲಿ ನೀಲಿ ತಂಡ ಪ್ರಥಮ, ಕಪ್ಪು ತಂಡ ದ್ವಿತೀಯ ಸ್ಥಾನ ಪಡೆಯಿತು.

ಕ್ರೀಡಾಕೂಟದ ಸಂದರ್ಭ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಆಡಳಿತಾತ್ಮಕ ಸಿಬ್ಬಂದಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net