

ಮೈಸೂರು: ಇಂದಿನ ವಿದ್ಯಾರ್ಥಿಗಳು ಆಧುನಿಕ ಸಂಸ್ಕೃತಿಯಿಂದ ಗ್ರಾಮೀಣ ಸಂಸ್ಕೃತಿಯ ಕಡೆಗೆ ಮುಖ ಮಾಡಬೇಕಾದ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ ಎಂ.ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.
ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡೆ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆಯೂ ಬಹಳ ಮುಖ್ಯ. ಅದರೊಂದಿಗೆ ಇಂದಿನ ವಿದ್ಯಾರ್ಥಿಗಳು ಆಧುನಿಕ ಸಂಸ್ಕೃತಿಯಿಂದ ಗ್ರಾಮೀಣ ಸಂಸ್ಕೃತಿ ಕಡೆಗೆ ಮುಖ ಮಾಡಬೇಕಿದೆ ಎಂದರು.
ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇವೆ. ಅವುಗಳನ್ನು ಹೊರತರಲು ಈ ರೀತಿಯ ಕಾರ್ಯಕ್ರಮ ಅವಶ್ಯಕ. ಮೊಬೈಲ್‌ನಿಂದ ಯುವ ಪೀಳಿಗೆ ತಮ್ಮ ಭವಿಷ್ಯವನ್ನೇ ಮರೆಯುತ್ತಿದೆ. ಹಾಗಾಗಿ ಹೆಚ್ಚಾಗಿ ಮೊಬೈಲ್ ಕಡೆ ಗಮನ ನೀಡದೆ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.
ಅಂತಾರಾಷ್ಟ್ರಿಯ ವಾಲಿಬಾಲ್ ನಿವೃತ್ತ ತರಬೇತುದಾರ ಎನ್.ಬಿ.ಸುರೇಶ್ ಮಾತನಾಡಿ, ಹೆಣ್ಣು ಮಕ್ಕಳು ಸಾಮಾಜಿಕ ಪಿಡುಗನ್ನು ಎದುರಿಸಲು ದೈಹಿಕ ಶಿಕ್ಷಣ ಅವಶ್ಯಕ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಲು ಯೋಗ ಅಗತ್ಯ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುತ್ತವೆ. ಆದರೆ ಅವುಗಳನ್ನು ಕಡೆಗಣಿಸದೆ ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಖಾಸಗಿ ವಾಹಿನಿ ಸ್ಪರ್ಧೆ ಗಾಯಕಿ ಅಮೂಲ್ಯ ಮಾತನಾಡಿ, ಸಾಧನೆಗೆ ಗುರಿ ಮುಖ್ಯ. ಗುರಿ ಇಲ್ಲದ್ದಿದರೆ ಏನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವತ್ತ ಸತತ ಪ್ರಯತ್ನ ಪಡಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಪೂರ್ಣಿಮಾ, ಶೈಕ್ಷಣಿಕ ಡೀನ್ ಡಾ.ರೇಚಣ್ಣ, ಉಪನ್ಯಾಸಕರಾದ ಬಿ. ಎಂ. ಉಮಾದೇವಿ, ರಶ್ಮಿ ಇತರರು ಇದ್ದರು.