ವಿದ್ಯಾಭ್ಯಾಸದ ಕಡೆಗೆ ವಿದ್ಯಾರ್ಥಿಗಳ ಗಮನವಿರಲಿ

Kaanunu
Published on

ನರಗುಂದ: ಹದಿನೆಂಟು ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸಿದರೆ ಮಾಲೀಕರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಹೇಳಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಗಿ ಜತೆಗೆ ಇನ್ಶೂರೆನ್ಸ್ ಹೊಂದಿರಬೇಕು ಎಂದರು.

ಮಗು ಜನಿಸಿದ 21 ದಿನಗಳ ಒಳಗಾಗಿ ಜನನ, ವ್ಯಕ್ತಿ ತೀರಿಕೊಂಡರೆ 21 ದಿನಗಳ ಒಳಗಾಗಿ ಮರಣ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಳ್ಳಬೇಕು. ಯುವತಿಯರು ಪ್ರೀತಿ, ಪ್ರೇಮದ ಕಡೆಗೆ ನಿಗಾ ವಹಿಸದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಭಾಗ್ಯಲಕ್ಷ್ಮೀ, ಗೃಹಲಕ್ಷ್ಮೀ, ಬಾಲಸಂಜೀವಿನಿ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ 1098 ಸಹಾಯವಾಣಿಗೆ ಉಚಿತ ಕರೆ ಮಾಡುವುದರ ಮೂಲಕ ಕಾನೂನು ನೆರವು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಗುರುನಾಥ ಹೂಗಾರ ಮಾತನಾಡಿ, ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತದೆ. ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ, ದೈಹಿಕ ದೌರ್ಜನ್ಯ ಮುಂತಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದರು.

ಸಿಡಿಪಿಒ ಕಮಲಾ ಹುಲಕೋಟಿ, ಎಸ್.ಎಸ್. ಹಿರೇಮಠ, ಗಿರೀಶ ದಾಸರ, ಪಿಎಸ್​ಐ ಸವಿತಾ ಮುನ್ಯಾಳ, ವಿ.ಎಸ್. ದೇಶಪಾಂಡೆ, ಪಿ.ಎಸ್. ಹುಂಬಿ, ಕೆ.ಎಸ್. ಹೂಲಿ, ಆರ್.ಆರ್. ನಾಯ್ಕರ, ಜೆ.ಸಿ. ಬೋಗಾರ, ಎಲ್.ಎಸ್. ಗಾಯಕವಾಡ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net