ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಲಿ

25sunti03
ಸುಂಟಿಕೊಪ್ಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಎಸ್‌ಐ ಸೈಮನ್ ಡಿಕುನ್ನ ಮಾತನಾಡಿದರು. ಚಿತ್ರಾ ಸುರೇಶ್, ಯಶೋದಾ ಇತರರಿದ್ದರು.
Published on

ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಾಸ್ಥ್ಯ ಸಂಕಲ್ಪದ ಕುರಿತು ಮಾಹಿತಿಯನ್ನು ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಜ್ಞಾನವಿಕಾಸ ಅಧಿಕಾರಿ ಮಾಲಿನಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಲ ವಿತರಿಸುವುದು, ವಸೂಲಾತಿ ಮಾಡುವುದಕ್ಕೆ ಮಾತ್ರ ಸಂಘವು ಸಿಮೀತಗೊಳ್ಳದೆ, ಸದಸ್ಯರ ವೈಯಕ್ತಿಕ ಅಭಿವೃದ್ಧಿಗೆ ಬೇಕಾದ ತರಬೇತಿಗಳನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಜೀವನವು ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಶಾಲೆಯ ಮುಖ್ಯಶಿಕ್ಷಕ ಬಾಲಕೃಷ್ಣ ಮಾತನಾಡಿ, ಇಂದಿನ ವೈಜ್ಞಾನಿಕತೆಯು ಬೆಳವಣಿಗೆಗೊಂಡಿದ್ದು, ಮಕ್ಕಳ ಸ್ವಾಸ್ಥ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ದಾಸತ್ವದಿಂದ ದೂರವಾಗಿರಬೇಕು. ದುಶ್ಚಟಗಳಿಗೆ ಬಲಿಯಾಗದೆ ಜ್ಞಾನರ್ಜನೆಯ ಕಡೆಗೆ ಗಮನಹರಿಸುವ ಮೂಲಕ ಪಾಲಕರಿಗೆ ಮತ್ತು ದೇಶಕ್ಕೆ ಉತ್ತಮ ಪ್ರಜೆಗಳಾಗಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಮಹತ್ತರ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ಸೈಮನ್ ಡಿಕುನ್ನ ಕಾರ್ಯಕ್ರಮ ಉದ್ಘಾಟಿಸಿ, ದುಶ್ಚಟಗಳಿಂದ ಮಕ್ಕಳ ಆರೋಗ್ಯದ ಬೀರುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಮಕ್ಕಳು ಉತ್ತಮ ಆರೋಗ್ಯ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಗೊಳ್ಳಬೇಕಾದರೆ ಮೊದಲಿಗೆ ಸತ್ಪಜೆಗಳಾಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭ ಸ್ವಾಸ್ಥ್ಯ ಸಂಕಲ್ಪದ ಅಂಗವಾಗಿ ಮಕ್ಕಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. ಶಾಲೆಯ ಸಹ ಶಿಕ್ಷಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಚಿತ್ರಾ ಸುರೇಶ್, ಯಶೋದಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net