ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲಿ

03Kush01
ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸುನೀತಾ, ರಮ್ಯಾ, ಪ್ರೇಮಕುಮಾರ್ ಇತರರು ಇದ್ದರು.
Published on

ಕುಶಾಲನಗರ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗಣಿತ, ಸಮಾಜ-ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬ ಗಮನ ಸೆಳೆಯಿತು.


ಕುಶಾಲನಗರ ರೋಟರಿ ಸಂಸ್ಥೆ, ಶಾಲೆಯ ವಿಜ್ಞಾನ ಸಂಘ, ಇಕೋ ಕ್ಲಬ್, ಗಣಿತ ಸಂಘ, ಕಲಾ ಸಂಘ, ಎನ್‌ಎಸ್‌ಎಸ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಅನುಪಯುಕ್ತ ವಸ್ತುಗಳಿಂದ ತಯಾರಿಸಿದ ವಿಜ್ಞಾನ, ಗಣಿತ ಹಾಗೂ ಕಲೆಗೆ ಸಂಬಂಧಿಸಿದ ಮಾದರಿಗಳು ವಿದ್ಯಾರ್ಥಿಗಳ ಸೃಜನಶೀಲತೆ ಬಿಂಬಿಸಿದವು.
ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷೆ ಸುನಿತಾ ಮಹೇಶ್, ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಸಮಾಜ ವಿಷಯಗಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಆ ಮೂಲಕ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ವಿಜ್ಞಾನ ನಮ್ಮ ಬದುಕಿನಲ್ಲಿ ಅಗತ್ಯವಾಗಿದೆ. ಭಾರತವು ವಿಶ್ವ ಮಟ್ಟದಲ್ಲಿ ವಿಜ್ಞಾನದ ಪ್ರಗತಿಗೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ದೇಶೀಯ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸಿಕೊಳ್ಳಬೇಕು ಎಂದರು.


ರೋಟರಿ ಸಂಸ್ಥೆ ಮಾಜಿ ಸಹಾಯಕ ಪ್ರಾಂತಪಾಲ ಮಹೇಶ್ ನಲ್ವಾಡಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ದಿನೇದಿನೆ ಬೆಳೆಯುತ್ತಿರುವುದರಿಂದ ಭಾರತ ದೇಶವು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಕಲಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಕಲಿಯುತ್ತಾ ಹೋದರೆ ತಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಕುರಿತು ಮಾತನಾಡಿದರು. ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯಾ, ಸರ್ ಸಿ.ವಿ.ರಾಮನ್ ಅವರ ರಾಮನ್ ಎಫೆಕ್ಟ್ ಕುರಿತು ವಿವರಿಸಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ, ಗಣಿತ ಸಂಘದ ಶಿಕ್ಷಕಿ ಬಿ.ಎನ್.ಸುಜಾತಾ, ಸಮಾಜ ಸಂಘದ ಶಿಕ್ಷಕಿ ಎಸ್.ಎಂ.ಗೀತಾ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಶರ್ಲಿ ಸಂತೋಷ, ಎಸ್‌ಡಿಎಂಸಿ ಸದಸ್ಯರಾದ ಎಂ.ರಂಗಸ್ವಾಮಿ, ಹೇಮಾವತಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಕೆ.ಟಿ.ಸೌಮ್ಯಾ, ಸಿಬ್ಬಂದಿ ಎಂ.ಉಷಾ, ವಿದ್ಯಾರ್ಥಿಗಳು ಇದ್ದರು. ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ವಸ್ತು ಪ್ರದರ್ಶನ ವೀಕ್ಷಿಸಿದರು.


ಗಮನ ಸೆಳೆದ ಮಕ್ಕಳ ಮಾದರಿಗಳು: ಸ್ವಚ್ಛ ಗ್ರಾಮ ಆರೋಗ್ಯ ಧಾಮ, ಮಳೆನೀರು ಕೊಯ್ಲು, ಕೃಷಿಯಂತ್ರ, ಚಂದ್ರಯಾನ-3, ಖಗೋಳ ವಿಜ್ಞಾನ ಮತ್ತು ಸೌರವ್ಯೆಹ ವ್ಯವಸ್ಥೆ, ಗಣಿತದಲ್ಲಿ ಗಣಿತಜ್ಞ ರಾಮಾನುಜನ್ ಅವರ ಸಾಧನೆಗಳು ಸೇರಿದಂತೆ ವಿವಿಧ ಮಾದರಿಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net