ವಿದ್ಯಾರ್ಥಿಗಳು ಸ್ವಾರ್ಥರಹಿತ ಸೇವೆಯಲ್ಲಿ ತೊಡಗಿಸಿಕೊಳ್ಳಲಿ

10 gkp 03
ಕಾರ್ಯಕ್ರಮದಲ್ಲಿ ಭಾಗಿಯಾದ ಎನ್.ಎಸ್.ಎಸ್ ವಿಧ್ಯಾರ್ಥಿಗಳು.
Published on

ಗೋಣಿಕೊಪ್ಪ : ಗೋಣಿಕೊಪ್ಪಲು ಕಾವೇರಿ ಕಾಲೇಜಿನ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಳುಗೋಡು ಏಕಲವ್ಯ ಕಾಲೇಜು ಪ್ರಾಂಶುಪಾಲ ಡಾ.ಐ.ಎಂ.ದಿಲನ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ರೂಪಿಸುವಲ್ಲಿ ಎನ್‌ಎಸ್‌ಎಸ್ ಪಾತ್ರ ಮಹತ್ವದ್ದಾಗಿದೆ. ಶಿಸ್ತು ಮತ್ತು ಸೇವಾ ಮನೋಭಾವನೆ, ಪರಿಸರದ ಕುರಿತು ಕಾಳಜಿ ಬೆಳೆಸಿಕೊಳ್ಳಲು ಶಿಬಿರ ಪ್ರೇರೇಪಿಸುವುದರ ಜತೆಗೆ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸಿಕೊಡುತ್ತದೆ. ಇಲ್ಲಿ ಕಲಿತ ಉತ್ತಮ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ವಾರ್ಥರಹಿತ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳು ವೇದಿಕೆಯಲ್ಲಿ ನಿಂತು ಮಾತನಾಡುವ ಧೈರ್ಯ ಬೆಳೆಸವುದರ ಜತೆಗೆ, ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಬೇಕಾದ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತದೆ. ವಿದ್ಯಾರ್ಥಿಗಳು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡು ಅದರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಐಕ್ಯೂಎಸಿ ಸಂಚಾಲಕಿ ಡಾ.ನಯನಾ ತಮ್ಮಯ್ಯ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಎನ್.ಪಿ.ರೀತಾ, ಎಂ. ಎನ್. ವನಿತ್ ಕುಮಾರ್ ಉಪಸ್ಥಿತರಿದ್ದರು.

ಎನ್‌ಎಸ್‌ಎಸ್‌ನ ಉತ್ತಮ ಹಿರಿಯ ಸ್ವಯಂಸೇವಕ ಪ್ರಶಸ್ತಿಯನ್ನು ದರ್ಶನ್, ಉತ್ತಮ ಹಿರಿಯ ಸ್ವಯಂ ಸೇವಕಿ ಪ್ರಶಸ್ತಿಯನ್ನು ರಶ್ಮಿತಾ ಪಡೆದರು. 2023-24 ನೇ ಸಾಲಿನ ಘಟಕದ ಉತ್ತಮ ಸ್ವಯಂ ಸೇವಕನಾಗಿ ಸೃಜನ್, ಉತ್ತಮ ಸ್ವಯಂ ಸೇವಕಿಯಾಗಿ ಧನ್ಯಾ, ಶಿಸ್ತು ಬದ್ಧ ಸ್ವಯಂಸೇವಕ ಪ್ರಶಸ್ತಿಯನ್ನು ಬೃಂದಾವನ್, ರಿಷು ಕಾವೇರಪ್ಪ ಮತ್ತು ರೋಷನ್ ಪಡೆದರು. ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ ವಿವಿಧ ಹಣ್ಣಿನ ಗಿಡ ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net