ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ

27 DVD 01
ದೇವದುರ್ಗ ಕಿತ್ತೂರುರಾಣಿ ಚನ್ನಮ್ಮ ಶಾಲೆಯಲ್ಲಿ ಆಯೋಜಿಸಿದ್ದ ಆವಿಷ್ಕಾರ ಮೇಳ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಪ್ರಾಚಾರ್ಯ ರಂಗಪ್ಪ ನಾಯಕ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ಅನಿಲ್ ಹಜೇರಿ, ಶಿವರಾಜ್ ಪೂಜಾರಿ, ಶಿವಕುಮಾರ, ಶ್ರೀಪಾದ ದೇಸಾಯಿ ಇದ್ದರು.
Published on

ದೇವದುರ್ಗ: ಜಗತ್ತು ವೈಜ್ಞಾನಿಕ ಚಿಂತನೆ ಹಾಗೂ ತಂತ್ರಜ್ಞಾನದಿಂದ ಮುನ್ನಡೆಯುತ್ತಿದ್ದು ನಮ್ಮ ಜೀವನ ವಿಜ್ಞಾನದ ಜತೆಗೆ ಬಾಂಧವ್ಯ ಹೊಂದಿದೆ. ವಿದ್ಯಾರ್ಥಿಗಳು ಆವಿಷ್ಕಾರದ ಬಗ್ಗೆ ಅಧ್ಯಯನ ಮಾಡುವ ಜತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ರಂಗಪ್ಪ ನಾಯಕ ಹೇಳಿದರು.

ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಟೈಟಾನ್ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ಆವಿಷ್ಕಾರ ಮೇಳ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ವಿಜ್ಞಾನ ಮೇಳದಿಂದ ವಿದ್ಯಾರ್ಥಿಗಳಲ್ಲಿ ನಾವಿನ್ಯ ಮತ್ತು ಕೌಶಲ ವೃದ್ಧಿಯಾಗುತ್ತದೆ. ಸುತ್ತಲಿನ ವಾತಾವರಣದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳಿಗೆ ಮಾದರಿಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದರ ಜತೆಗೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬಹುದು. ಸಮಾಜವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅರಿಯಬಹುದು. ನಮ್ಮ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದ್ದು ವಿಜ್ಞಾನ ಇಲ್ಲದೆ ಬದುಕೇ ಇಲ್ಲ ಎನ್ನುವಂತಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ ಮಾತನಾಡಿ, ಆಧುನಿಕ ಬದುಕಿನಲ್ಲಿ ವಿಜ್ಞಾನವೇ ಸರ್ವಸ್ವ. ನಮ್ಮ ಪ್ರತಿಕೆಲಸದಲ್ಲೂ ವಿಜ್ಞಾನವನ್ನು ಕಾಣಬಹುದು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಶಿಕ್ಷಕರು ಮುಂದಾಗಬೇಕು. ಇಂಥ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಪ್ರೇರಣೆಯಾಗಲಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು 55ಕ್ಕೂ ಹೆಚ್ಚು ವೈವಿಧ್ಯಮಯ ಮಾದರಿಗಳನ್ನು ಪ್ರದರ್ಶಿಸಿದರು. ಉತ್ತಮ ಮಾದರಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net