ಬಾಲ್ಯದಿಂದಲೇ ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಳ್ಳಲಿ

IMG-20250527-WA0042
Published on

ಶ್ರೀರಂಗಪಟ್ಟಣ: ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಾಭಿಮಾನ ಹಾಗೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ಕರಿಘಟ್ಟದಲ್ಲಿ ಆಯೋಜಿಸಿದ್ದ ಜನಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಿಘಟ್ಟ ಬೆಟ್ಟದ ಕಾಡಿಗೆ ಬೆಂಕಿ ಹಚ್ಚಿ ಹರಕೆ ತೀರಿಸಿದರೆ ಮಕ್ಕಳಾಗುತ್ತದೆ ಎಂಬ ಮೂಢ ನಂಬಿಕೆಯಿಂದ ಸಾರ್ವಜನಿಕರು ಹೊರಬರಬೇಕು. ಕಾಡುಗಳು ಮತ್ತು ಮರಗಳಿಗೆ ಬೆಂಕಿ ಹಾಕುವ ಕೃತ್ಯ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಕೃತಿಯನ್ನು ರಕ್ಷಣೆ ಮತ್ತು ಪೋಷಣೆ ಮಾಡದಿದ್ದಲ್ಲಿ ಮುಂದೆ ಪ್ರಕೃತಿ ವಿಕೋಪಗಳು ಹೆಚ್ಚಾಗುವುದರ ಜತೆಗೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದ ಅವರು, ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಕನಿಷ್ಠ ಒಂದು ಗಿಡವನ್ನು ನೆಟ್ಟಿ ಬೆಳೆಸಿ ಎಂದು ಹೇಳಿದರು.

ಹಸಿರೇ ಉಸಿರು ಎಂಬುದು ಘೋಷವಾಕ್ಯವಾಗಬಾರದು. ಬದಲಾಗಿ ವಿದ್ಯಾರ್ಥಿಗಳು ಗಿಡ-ಮರಗಳ ಉಪಯೋಗದ ಕುರಿತು ಹಿರಿಯರಿಗೆ ಅರಿವು ಮೂಡಿಸಬೇಕು ಎಂದರು.

ದೇಶದ ಪ್ರಜೆಗಳು ಹಣದ ಆಮಿಷಕ್ಕೊಳ್ಳಗಾಗಿ ಮತದಾನ ಮಾಡುತ್ತಿದ್ದಾರೆ. ಉತ್ತಮ ನಾಯಕರು ಆಯ್ಕೆಯಾಗದಿದ್ದಲ್ಲಿ ದೇಶವನ್ನು ಲೂಟಿ ಮಾಡುತ್ತಾರೆ. ನಮ್ಮ ದೇಶದ ಅತಿ ದೊಡ್ಡ ಪಿಡುಗು ಭ್ರಷ್ಟಾಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಪರಿಸರಪ್ರೇಮಿ ರಮೇಶ್, ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್, ರಾಷ್ಟ್ರಪ್ರಶಸ್ತಿ ವಿಜೇತ ಡಾ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net