ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

20 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ದಿಸೆಯಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳುವುದು ಹಾಗೂ ಇನ್ನೊಬ್ಬರ ಒಳ್ಳೆಯ ಅಭಿಪ್ರಾಯಗಳಿಗೆ ಮಾನ್ಯತೆ ನೀಡುವುದರಿಂದ ಸಾಮಾಜಿಕ ಉನ್ನತಿ ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳಸಿಕೊಳ್ಳಬೇಕು ಎಂದು ಡಾ. ರಾಜನ್​ ದೇಶಪಾಂಡೆ ಹೇಳಿದರು.
ನಗರದ ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಒಕ್ಕೂಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿ ವಿಷಯ ಹಾಗೂ ಚಟುವಟಿಕೆಗಳಲ್ಲಿ ಗಂಭೀರವಾಗಿ ತೊಡಗಿದರೆ ಸಾಧನೆಯ ಹಾದಿ ಸುಗಮವಾಗಲಿದೆ. ಮಾನವೀಯ ಮೌಲ್ಯಗಳೇ ಎಲ್ಲರ ಅತ್ಯುತ್ತಮ ಸಾಧನೆ. ಹೀಗಾಗಿ ಮಾನವೀಯ ಮೌಲ್ಯ ಬೆಳೆಸಿಕೊಂಡು ಇನ್ನೊಬ್ಬರ ಕಷ್ಟಗಳಿಗೆ ನೆರವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಇ.ಬೋಡಿರ್ನ ಕಾರ್ಯದರ್ಶಿ ಡಿ.ಎಸ್​. ರಾಜಪುರೋಹಿತ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಗರಿಕ ಗುಣಗಳು ಬೆಳೆಯಲು ಸಾಂಸ್ಕೃತಿಕ ಚಟುವಟಿಕೆಗಳು ಪೂರಕ. ಅದೇ ರೀತಿ ಶಿಕ್ಷಕರ ಸೂಕ್ತ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ನಿಷ್ಠೆಯ ಗುಣಗಳನ್ನು ಬೆಳೆಸಿಕೊಳ್ಳುವುದು ಶೈಕ್ಷಣಿಕ ಪ್ರಗತಿಯ ದಿಕ್ಸೂಚಿಗಳಾಗುತ್ತವೆ ಎಂದರು.
ಕಾಲೇಜಿನ ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳು, ಇತರರು ಇದ್ದರು. ಡಾ. ಶರಣಮ್ಮ ಗೋರೆಬಾಳ ಸ್ವಾಗತಿಸಿದರು. ಡಾ. ಭರತ ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು. ಪಲ್ಲವಿ ಹೆಗಡೆ ನಿರೂಪಿಸಿದರು. ಮಹೇಶ ಕುರುಬರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net