ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಮುಖ್ಯವಾಹಿನಿಗೆ ಬರಲಿ

ಚಿತ್ರ 15ಎಸ್ ಡಿ ಪಿ 02
ಶೈಕ್ಷಣಿಕ ಬೆಳವಣಿಗೆಗೆ ಮಾಹಿತಿ ಕಾರ್ಯಗಾರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿ ನ್ಯಾಯಾಧೀಶೆ ಎ.ಎಸ್.ಸಲ್ಮಾ, ನಿವೃತ ಹಿರಿಯ ನ್ಯಾಯಾಧೀಶ ಶಫೀರ್, ನೈಮಾ ಸಂಘಟನೆಯ ಅಧ್ಯಕ್ಷ ಒ.ಎಂ. ನೌಶಾದ್, ಪಿಡಿಓ ಅಬ್ದುಲ್ಲಾ, ಮುಸ್ತಾಫಾ ಇದ್ದರು.
Published on

ಸಿದ್ದಾಪುರ: ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿ ಎಂದು ಆನೇಕಲ್ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಎ.ಎಸ್.ಸಲ್ಮಾ ಆಶಿಸಿದರು.

ನೈಮಾ ಎಜುಕೇಶನಲ್ ಆ್ಯಂಡ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೆಲ್ಯಹುದಿಕೇರಿ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಶೈಕ್ಷಣಿಕ ಬೆಳವಣಿಗೆಗೆ ಮಾಹಿತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಉನ್ನತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಕಾನೂನು ಪದವಿ ಪಡೆದುಕೊಳ್ಳಬೇಕು. ಕಾನೂನಿನ ತಿಳಿವಳಿಕೆಯಿಂದ ಸಮಾಜದ ತಪ್ಪುಗಳನ್ನು ತಿದ್ದುವ ಅವಕಾಶಗಳಿರುತ್ತವೆ. ಅದರಲ್ಲೂ ವಿದ್ಯಾರ್ಥಿನಿಯರು ಕಾನೂನು ಪದವಿ ಪಡೆಯುವ ಮೂಲಕ ಗೌರವಯುತ ಬದುಕು ಸಾಗಿಸಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಕಡ್ಡಾಯವಾಗಿ ಶಾಲಾ-ಕಾಲೇಜಿಗೆ ಬರುವ ಮೂಲಕ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಿವೃತ್ತ ಹಿರಿಯ ನ್ಯಾಯಾಧೀಶ ಎ.ಎ.ಶಫೀರ್ ಮಾತನಾಡಿ, ಕಾನೂನು ವೃತ್ತಿಯಲ್ಲಿರುವ ವಿವಿಧ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರಲ್ಲದೆ, ಶಿಕ್ಷಣದೊಂದಿಗೆ ಕಾನೂನು ಅರಿವಿನ ಮೂಲಕ ಮುನ್ನಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯು ನಂತರ ಇರುವ ವಿವಿಧ ಅವಕಾಶಗಳ ಕುರಿತು ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಎಂ. ಶಾಕಿರ್ ಮಾಹಿತಿ ನೀಡಿದರು.

ಈ ವೇಳೆ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ನೈಮಾ ಸಂಘಟನೆಯ ಅಧ್ಯಕ್ಷ ಒ.ಎಂ .ನೌಶಾದ್, ಮಾಜಿ ಗ್ರಾಪಂ ಅಧ್ಯಕ್ಷ ಎ.ಕೆ.ಹಕೀಂ, ಸಹಾಯಕ ಪ್ರಾಧ್ಯಾಪಕ ಎಚ್.ನೌಶಾದ್, ಪಿಡಿಒ ಅಬ್ದುಲ್ಲಾ, ಪ್ರಮುಖರಾದ ಕೆ.ಎಂ ಬಷೀರ್, ಎ.ಕೆ.ಅಬ್ದುಲ್ಲ, ಸಿ.ಎಂ.ಹಂಸ, ಪಿ.ಎ.ಅಬ್ದುಲ್ಲ, ಪಿ.ಎಚ್.ಅಪ್ಸಲ್, ಪಿ.ಕೆ.ಮುಸ್ತಾಫಾ, ಜಂಶೀರ್, ಕೆ.ಎಂ.ಮುಸ್ತಫಾ, ಮುತ್ತಲಿಬ್, ಫಾಝಿಲ್, ಲಿಮ್ರಾ, ಸಲೀಂ, ಆರಿಫ್, ಮೊಯ್ನುದ್ದೀನ್, ಶಮೀರ್, ಶಂಸುದ್ದೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net